ಸುಬ್ರಹ್ಮಣ್ಯ ಕಾಲನಿಯಲ್ಲಿ ಅಂಗನವಾಡಿ ಕಟ್ಟಡಕ್ಕೆ ಆಕ್ಷೇಪ

Update: 2016-09-27 18:23 GMT

ಸುಳ್ಯ, ಸೆ.27: ಸುಬ್ರಹ್ಮಣ್ಯ ಗ್ರಾಮದ ಕಾಶಿಕಟ್ಟೆ ಪರಿಶಿಷ್ಟ ಜಾತಿ ಕಾಲೋನಿ ಬಳಿ ಉದ್ದೇಶ ಪೂರ್ವಕವಾಗಿ ಅಂಗನವಾಡಿ ಕಟ್ಟಡ ನಿರ್ಮಿಸಲು ಜಮೀನು ಕಾಯ್ದಿರಿಸಿದ್ದು, ಅದನ್ನು ರದ್ದು ಮಾಡದಿದ್ದರೆ ಅ.10ರಂದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಆದಿ ದ್ರಾವಿಡ ಸಮಾಜ ಸೇವಾ ಸಂಘ ಎಚ್ಚರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಕೆ.ಎಂ.ಬಾಬು, ಕಾಲೋನಿಯ ಪಕೀರ ಹಾಗೂ ರಾಘವ ಎಂಬವರಿಗೆ ಸೇರಿದ ಜಮೀನನ್ನು ಸರಕಾರಿ ಜಮೀನು ಎಂದು ದಾಖಲೆ ಮಾಡಿ, ಯಾರ ಗಮನಕ್ಕೂ ತರದೆ ಗ್ರಾಪಂನವರು ಅಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಕಾಯ್ದಿರಿಸಿದ್ದಾರೆ. ಅಲ್ಲಿಂದ 200 ಮೀ. ದೂರದ ದೇವಸ್ಥಾನದ ಜಮೀನಿನಲ್ಲಿ ಈಗಾಗಲೇ ಸುಸಜ್ಜಿತ ಅಂಗನವಾಡಿ ಕಟ್ಟಡವಿದ್ದು, ಕಾಲೋನಿಯಲ್ಲಿ ಹೊಸ ಕಟ್ಟಡ ಕಟ್ಟುವ ಅಗತ್ಯವಿಲ್ಲ. ಅಂಗನವಾಡಿಯನ್ನು ಕಾಲೋನಿಗೆ ಸ್ಥಳಾಂತರಿಸಿದರೆ, ಅಲ್ಲಿ ಪರಿಶಿಷ್ಟರಿಗೆ ಮನೆ ನಿರ್ಮಿಸಲು ಬೇರೆ ಜಮೀನು ಇಲ್ಲ ಎಂದರು.
ಈ ಹಿನ್ನೆಲೆಯಲ್ಲಿ ಸದ್ಯ ಕಾರ್ಯಾಚರಿಸುತ್ತಿರುವ ಎಲ್ಲ ಮೂಲ ಸೌಕರ್ಯವುಳ್ಳ ಅಂಗನವಾಡಿಯನ್ನು ಯಾವುದೇ ಕಾರಣಕ್ಕೂ ಕಾಲೋನಿಗೆ ಸ್ಥಳಾಂತರಿಸಬಾರದು ಎಂದು ಆಗ್ರಹಿಸಿದರು. ಸಂಘದ ಅಧ್ಯಕ್ಷ ಆರ್.ಬಿ.ಮೋನಪ್ಪ, ದಿಲೀಪ್ ಕೊಡಿಯಾಲ್‌ಬೈಲು, ಉಮೇಶ್ ಬೂಡು, ಪಕೀರ ಸುಬ್ರಹ್ಮಣ್ಯ, ಚಂದ್ರಕಾಂತ ಬೆಳ್ಳಾರೆ, ರಾಘವ ಸುಬ್ರಹ್ಮಣ್ಯ, ಶಿವಪ್ರಸಾದ್ ಸುಬ್ರಹ್ಮಣ್ಯ, ಪಾರ್ವತಿ ಸುಬ್ರಹ್ಮಣ್ಯ, ಉಮೇಶ್ ಸುಬ್ರಹ್ಮಣ್ಯ, ಉಮೇಶ್ ಬೆಳ್ಳಾರೆ, ಭವ್ಯಾ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News