ಜಾರಿಗೆಬೈಲ್: ಎಸ್‌ಬಿಎಸ್‌ಯಿಂದ ಬ್ಯಾರಿಕೇಡ್ ಕೊಡುಗೆ
ಬೆಳ್ತಂಗಡಿ, ಸೆ.28: ಜಾರಿಗೈಬೆಲು ನಾಳದ ಬದ್ರಿಯಾ ಜುಮಾ ಮಸೀದಿ ಅಧೀನದ ಹಿದಾಯತುಲ್ ಇಸ್ಲಾಮ್ ಸೆಕೆಂಡರಿ ಮದ್ರಸ ವಿದ್ಯಾರ್ಥಿಗಳ ಸಂಘಟನೆ ಸುನ್ನಿ ಬಾಲ ಸಂಘ (ಎಸ್‌ಬಿಎಸ್)ವು ಊರ ದಾನಿಗಳ ನೆರವಿನಿಂದ ನಿರ್ಮಿಸಿದ ಎರಡು ಬ್ಯಾರಿಕೇಡ್‌ಗಳನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.
ಉಪ್ಪಿನಂಗಡಿ ಬೆಳ್ತಂಗಡಿ ಮುಖ್ಯ ರಸ್ತೆಯ ಜಾರಿಗೆಬೈಲಿನಲ್ಲಿ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಹಿದಾಯತುಲ್ ಇಸ್ಲಾಮ್ ಸೆಕೆಂಡರಿ ಮದ್ರಸ ರಸ್ತೆಯ ಒಂದು ಭಾಗದಲ್ಲಾದರೆ ಮತ್ತೊಂದೆಡೆ ಬದ್ರಿಯಾ ಜುಮಾ ಮಸೀದಿ ಇರುವುದರಿಂದ ದಿನಕ್ಕೆ ಹಲವು ಬಾರಿ ರಸ್ತೆ ದಾಟುವ ವಿದ್ಯಾರ್ಥಿಗಳ ಹಾಗೂ ನಾಗರಿಕರ ಸುರಕ್ಷತೆಗಾಗಿ ಈ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ. ಬ್ಯಾರಿಕೇಡ್‌ನ್ನು ಬೆಳ್ತಂಗಡಿ ಆರಕ್ಷಕ ಠಾಣೆ, ಕಳಿಯ ಗ್ರಾಮ ಪಂಚಾಯತ್ ಹಾಗೂ ರಸ್ತೆ ಪ್ರಾಧಿಕಾರದ ಅನುಮತಿಯನ್ವಯ ಅಳವಡಿಸಲಾಗಿದೆ.
ಬ್ಯಾರಿಕೇಡ್‌ನ್ನು ಲೋಕಾರ್ಪಣೆ ಮಾಡಿದ ಬೆಳ್ತಂಗಡಿ ಎಎಸ್ಸೈ ಮಧು ಟಿ., ಈ ಪ್ರದೇಶದಲ್ಲಿ ಬ್ಯಾರಿಕೇಡ್ ಅಳವಡಿಕೆ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಇಲಾಖೆಯೊಂದಿಗೆ ಕೈ ಜೋಡಿಸಿದ ಜಾರಿಗೆಬೈಲು ಜಮಾಅತ್‌ರ ಶ್ಲಾಘನೀಯ ಎಂದರು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಥಳೀಯ ಮುದರ್ರಿಸ್ ಅಬ್ದುರಹ್ಮಾನ್ ಬಾಖವಿ ನೆರವೇರಿಸಿದರು. ಆಡಳಿತ ಸಮಿತಿಯ ಅಧ್ಯಕ್ಷ ಅಬ್ಬೋನು ಶಾಫಿ ಪಳ್ಳಾದೆ ಅಧ್ಯಕ್ಷತೆ ವಹಿಸಿದ್ದರು. ಮದ್ರಸ ಮುಖ್ಯೋಪಾಧ್ಯಾಯ ಎನ್.ಎಂ.ಶರೀಫ್ ಸಖಾಫಿ ನೆಕ್ಕಿಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಜಮಾಅತ್ ಕಾರ್ಯದರ್ಶಿ ಹಾರಿಸ್ ಕುಕ್ಕುಡಿ, ಮದ್ರಸ ಅಧ್ಯಾಪಕರಾದ ಅಬ್ದುರ್ರಝಾಕ್ ಸಅದಿ, ಸತ್ತಾರ್ ಮದನಿ, ಸಿರಾಜುದ್ದೀನ್ ಝುಹ್‌ರಿ ಹಾಗೂ ಆಡಳಿತ ಸಮಿತಿ ಪದಾಧಿಕಾರಿಗಳು, ಜಮಾಅತರು, ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಗೋವಿಂದೂರ್ ವಂದಿಸಿದರು.