×
Ad

ನದಿಗೆ ಹಾರಿದ ಬಸ್ ನಿರ್ವಾಹಕನ ಮೃತದೇಹ ಪತ್ತೆ

Update: 2016-09-28 12:20 IST

ಸುಬ್ರಹ್ಮಣ್ಯ, ಸೆ.28: ಪ್ರಯಾಣಿಕ ಯುವತಿಯೊಬ್ಬಳೊಂದಿಗೆ ನಡೆದ ಚಿಲ್ಲರೆ ಹಣದ ವಿಚಾರವಾಗಿ ನಡೆದ ವಿವಾದದ ಬಳಿಕ ನದಿಗೆ ಹಾರಿದ್ದ ಬಸ್ ಚಾಲಕನ ಮೃತದೇಹ ಇಂದು ಪೂರ್ವಾಹ್ನ ಸುಬ್ರಹ್ಮಣ್ಯದಲ್ಲಿ ಪತ್ತೆಯಾಗಿದೆ.
ಸಾರಿಗೆ ಬಸ್ ನಿರ್ವಾಹಕ ಮಂಗಳೂರಿನ ಗುರುಪುರ ಕೈಕಂಬ ನಿವಾಸಿ ದೇವದಾಸ್(48) ರವಿವಾರ ಸುಬ್ರಹ್ಮಣ್ಯದ ಕುಮಾರಧಾರಾ ನದಿಯ ಸೇತುವೆಯ ಮೇಲಿಂದ ಹಾರಿದವರು ಬಳಿಕ ನಾಪತ್ತೆಯಾಗಿದ್ದರು. ಅವರಿಗಾಗಿ ಮೂರು ದಿನಗಳಿಂದ ತೀವ್ರ ಶೋಧ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಇಂದು ಬೆಳಗ್ಗೆಯಿಂದ ಮತ್ತೆ ಶೋಧ ಮುಂದುವರಿಸಿದಾಗ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟಕ್ಕಿಂತ ಎರಡು ಕಿ.ಮೀ. ದೂರ ಭಟ್ಟಕಯ ಎಂಬಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಮೃತದೇಹವನ್ನು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ.
ದೇವದಾಸ್‌ರ ಪತ್ತೆಗಾಗಿ ಪುತ್ತೂರಿನ ಅಗ್ನಿಶಾಮಕದಳ ಹಾಗೂ ಗುಂಡ್ಯದ 10 ಮಂದಿ ಈಜುಗಾರರು ಮತ್ತು ಪಾಣೆಮಂಗಳೂರಿನ 5ಮಂದಿ ಈಜುಗಾರರನ್ನು ಒಳಗೊಂಡ ಮುಳುಗು ತಜ್ಞರ ತಂಡ ಕುಮಾರಧಾರಾ ನದಿಯಲ್ಲಿ ನಿರಂತರ ಶೋಧ ನಡೆಸಿತ್ತು. ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಗೋಪಾಲ್ ಮತ್ತು ಕಡಬ ಠಾಣಾಧಿಕಾರಿ ಉಮೇಶ್ ಉಪ್ಪಳಿಕೆ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು. ಘಟನೆ ಹಿನ್ನೆಲೆ:
ದೇವದಾಸ್ ಮಂಗಳೂರು ಒಂದನೆ ಘಟಕಕ್ಕೆ ಸೇರಿದ ಸಾರಿಗೆ ಬಸ್‌ನಲ್ಲಿ ನಿರ್ವಾಹಕರಾಗಿದ್ದರು. ಬಸ್ ಮಂಗಳೂರಿನಿಂದ ಬೆಳಗ್ಗೆ 6:30ಕ್ಕೆ ಹೊರಟು ಕುಕ್ಕೆ ಸುಬ್ರಹ್ಮಣ್ಯ ಕಡೆ ಸಂಚರಿಸುತ್ತಿತ್ತು. ಮಂಗಳೂರಿ ನಲ್ಲಿ ಬಸ್ ಏರಿದ ಯುವತಿಯೊಬ್ಬರು ಟಿಕೇಟ್ ಪಡೆುುವ ಸಂದರ್ಭ ಸಣ್ಣ ಗೊಂದಲ ಉಂಟಾ
ಗಿತ್ತು ಯುವತಿ ಟಿಕೇಟ್‌ಗಾಗಿ 500 ರೂ. ನೋಟು ನೀಡಿದ್ದಾಗಿ ಹೇಳಿದ್ದು ದೇವದಾಸ್ 100 ರೂ. ನೀಡಿದ್ದಾಗಿ ಹೇಳಿ ಉಳಿದ ಚಿಲ್ಲರೆ ಹಣ ಯುವತಿಗೆ ನೀಡಿದ್ದರು. ಈ ವಿಚಾರವಾಗಿ ಯುವತಿ ಮತ್ತು ನಿರ್ವಾಹಕನ ನಡುವೆ ಮಾತಿನ ಚಕಮಕಿ ನಡೆದಿತ್ತು. ಠಾಣೆಯ ಮೆಟ್ಟಿಲೇರಿತು.
   ಈ ಘಟನೆಯ ವಿಚಾರವಾಗಿ ಯುವತಿ ತನ್ನ ಸಂಬಂಧಿಕರಿಗೆ ಮೊಬೈಲ್ ಮೂಲಕ ಕರೆ ಮಾಡಿ ತಿಳಿಸಿದ್ದಳು. ಪ್ರಕರಣದ ಗಂಭೀರತೆ ಅರಿತುಕೊಂಡ ನಿರ್ವಾಹಕ ಬಸ್ ಕಡಬ ತಲುಪುವ ವೇಳೆಗೆ ಚಾಲಕನ ಬಳಿ ಬಸ್ ನಿಲ್ಲಿಸುವಂತೆ ಸೂಚಿಸಿ, ಯುವತಿ ಜತೆ ನೇರ ಕಡಬ ಪೊಲೀಸ್ ಸ್ಟೇಶನ್‌ಗೆ ತೆರಳಿ ನಡೆದ ಘಟನೆ ಕುರಿತು ಮಾಹಿತಿ ನೀಡಿದ್ದರು. ಇದೇ ವೇಳೆಗೆ ಯುವತಿಯ ಸಂಬಂಧಿಕರು ಕೂಡ ಠಾಣೆಗೆ ಆಗಮಿಸಿದ್ದರು. ನಿರ್ವಾಹಕ ಮತ್ತು ಯುವತಿ ನಡುವಿನ ಪರಸ್ಪರ ಆರೋಪ -ಪ್ರತ್ಯಾರೋಪ ಕುರಿತಂತೆ ವಿಚಾರಣೆ ನಡೆಸಿದ ಪೊಲೀಸರು ಇಬ್ಬರಿಗೂ ಬುದ್ಧ್ದಿವಾದ ಹೇಳಿ ಪ್ರಕರಣ ವನ್ನು ಇತ್ಯರ್ಥ ಮಾಡಿ ಕಳುಹಿಸಿಕೊಟ್ಟಿದ್ದರು.
ಬಸ್‌ನಿಂದ ನದಿಗೆ ಹಾರಿದರು
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ದೇವದಾಸ್ ಬಸ್ ಕಡಬದಿಂದ ಪ್ರಯಾಣ ಮುಂದುವರಿಸಿ ಸುಬ್ರಹ್ಮಣ್ಯದ ಕುಮಾರಧಾರಾ ನದಿಯ ಸೇತುವೆ ಮೇಲೆ ಸಂಚರಿಸುತ್ತಿದ್ದ ವೇಳೆ ಸೀಟಿ ಊದಿ ಬಸ್ಸನ್ನು ನಿಧಾನಗೊಳಿಸಿ ತುಂಬಿ ಹರಿಯುತ್ತಿದ್ದ ನದಿಗೆ ಹಾರಿದ್ದರು.
 
ಈ ಸಂದರ್ಭ ದೇವದಾಸ್ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗುತ್ತಿದ್ದ ವೇಳೆ ಸ್ನಾನ ಘಟ್ಟದ ಮೇಲ್ಭಾಗದಲ್ಲಿ ಸ್ನಾನ ಮಾಡುತ್ತಿದ್ದ ಪ್ರವಾಸಿ ಭಕ್ತರೊಬ್ಬರು ರಕ್ಷಣೆಗೆ ಮುಂದಾಗಿ ಮುಳುಗುತ್ತಿದ್ದವರ ಕೈ ಹಿಡಿದು ಮೇಲಕ್ಕೆತ್ತುವ ಯತ್ನ ಮಾಡಿದ್ದರು. ಆದರೆ ಅವರಿಂದ ಬಿಡಿಸಿಕೊಂಡು ದೇವದಾಸ್ ನೀರುಪಾಲಾಗಿದ್ದರು. ದಡದ ಕೆಳಗಿದ್ದವರು ಕೂಡ ರಕ್ಷಣೆಗೆ ಮುಂದಾಗಿದ್ದು ಪ್ರಯತ್ನ ಫಲ ನೀಡಿಲ್ಲ. ಸಾರಿಗೆ ವ್ಯವಸ್ಥೆಯಲ್ಲಿ ಉತ್ತಮ ಕಾರ್ಯ ವೆಸಗುವ ಮೂಲಕ ಸಜ್ಜನ ವ್ಯಕ್ತಿಯಾಗಿದ್ದ ದೇವದಾಸ್ ಕಳೆದ ವರ್ಷ ಸಾರಿಗೆ ಸಂಸ್ಥೆ ನೌಕರರಿಗೆ ನೀಡುವ ಉತ್ತಮ ನಿರ್ವಾಹಕ ಪ್ರಶಸ್ತಿಗೆ ಭಾಜನರಾಗಿದ್ದರು ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.
ಮರ್ಯಾದೆ ಹೋಗಿ ಬದುಕುವುದಕ್ಕಿಂತ ಸಾಯುವುದೇ ಲೇಸು. ನನ್ನ ಸಹೋದ್ಯೋಗಿಗಳಿಗೆ ಕೊನೆಯ ನಮಸ್ಕಾರಗಳು ಎಂದು ದೇವದಾಸ್ ಡೆತ್ ನೋಟ್ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News