26 ವರ್ಷಕ್ಕೇ ವಿಮಾನದ ಮುಖ್ಯ ಪೈಲೆಟ್, 19 ವರ್ಷದ ಸಹ ಪೈಲೆಟ್ !
ಇವರ ಒಟ್ಟಾರೆ ವಯಸ್ಸು 45. ಆದರೆ 26 ವರ್ಷದ ಕ್ಯಾಪ್ಟನ್ ಕೇಟ್ ಮೆಕ್‌ವಿಲಿಯಮ್ಸ್ ಮತ್ತು ಆಕೆಯ 19 ವರ್ಷದ ಸಹ ಪೈಲೆಟ್ ಲ್ಯೂಕ್ ಎಕ್ಸ್‌ವರ್ತ್ ನೂರಾರು ಪ್ರಯಾಣಿಕರನ್ನು ತಮ್ಮ ಗುರಿಯತ್ತ ತಲುಪಿಸುವಲ್ಲಿ ಅವರ ವಯಸ್ಸು ಅಡ್ಡಿಯಾಗಿಲ್ಲ. ಮೆಕ್‌ವಿಲಿಯಮ್ಸ್ ಕ್ಯಾಪ್ಟನ್ ಶ್ರೇಣಿ ಪಡೆಯುವ ಕೋರ್ಸ್ ಪಾಸಾದ ಮೇಲೆ ಈ ಯುವ ಪೈಲೆಟ್‌ಗಳು ಲಂಡನ್‌ನಿಂದ ಮಾಲ್ಟಾಗೆ ವಿಮಾನವನ್ನು ಚಲಾಯಿಸಿದ್ದಾರೆ. ಇವರನ್ನು ಉದ್ಯೋಗದಲ್ಲಿ ನೇಮಿಸಿರುವ ಬ್ರಿಟಿಷ್ ವಿಮಾನವಾದ ಈಸಿಜೆಟ್ ಸಂಸ್ಥೆ ಹೇಳುವ ಪ್ರಕಾರ ಮೆಕ್‌ವಿಲಿಯಮ್ಸ್ ವಿಶ್ವದ ಅತೀ ಚಿಕ್ಕ ವಯಸ್ಸಿನ ಕಮರ್ಶಿಯಲ್ ಏರ್‌ಲೈನ್ ಕ್ಯಾಪ್ಟನ್. ಹಾಗೆಯೇ ಸಹ ಪೈಲೆಟ್ ಎಲ್ಸ್‌ವರ್ತ್ ಕೂಡ ದೇಶದ ಚಿಕ್ಕ ವಯಸ್ಸಿನ ಸಹಪೈಲೆಟ್.
ಮಹಿಳಾ ವಿಮಾನಯಾನ ಪೈಲೆಟ್‌ಗಳ ಅಂತಾರಾಷ್ಟ್ರೀಯ ಸಮಾಜದ ಪ್ರಕಾರ ವಿಶ್ವದಾದ್ಯಂತ ಇರುವ 1,30,000 ಪೈಲೆಟ್‌ಗಳಲ್ಲಿ ಕೇವಲ 450 ಮಾತ್ರ ಮಹಿಳಾ ಕ್ಯಾಪ್ಟನ್‌ಗಳು. ಮೆಕ್‌ವಿಲಿಯಮ್ಸ್ ಇನ್ನಷ್ಟು ಮಹಿಳೆಯರು ಈ ಶ್ರೇಣಿಗೆ ಏರಬೇಕು ಎಂದು ಬಯಸಿದ್ದಾರೆ. “ನಾನು 13 ವರ್ಷ ವಯಸ್ಸಿನಲ್ಲಿಯೇ ಏರ್ ಕೆಡೆಟ್ಸ್ ಸೇರಿದೆ. ಅಲ್ಲೇ ನಾನು ಸಾಕಷ್ಟು ಹಾರಾಟ ಅನುಭವ ಪಡೆದೆ. ನಾನು ನಾಗರಿಕ ವಾಯುಯಾನದಲ್ಲಿ ವೃತ್ತಿ ನಿಭಾಯಿಸುವ ಬಗ್ಗೆ ಯೋಚಿಸಿಯೇ ಇರಲಿಲ್ಲ. ಏಕೆಂದರೆ ಸಲಹೆ ಕೇಳಲು ನನಗೆ ಯಾವ ವಾಣಿಜ್ಯ ಪೈಲೆಟ್‌ಗಳ ಬಗ್ಗೆಯೂ ತಿಳಿದಿರಲಿಲ್ಲ. ನನ್ನ ಬಳಿ ಅಂತಹ ಆಯ್ಕೆ ಇರಬಹುದು ಎಂದೂ ಅಂದುಕೊಳ್ಳಲಿಲ್ಲ” ಎನ್ನುತ್ತಾರೆ ನಾಲ್ಕನೇ ವಯಸ್ಸಿನಲ್ಲಿ ಏರ್‌ಶೋ ನೋಡಿದ ಮೇಲೆ ವಿಮಾನಗಳತ್ತ ಆಸಕ್ತಿ ಬೆಳೆಸಿಕೊಂಡ ಮೆಕ್‌ವಿಲಿಯಮ್ಸ್. ಅವರು ಲಂಡನ್‌ನ ಗೇಟ್‌ವಿಕ್ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತಾರೆ.
19ರ ವಯಸ್ಸಿನಲ್ಲಿ ಮೆಕ್‌ವಿಲಿಯಮ್ಸ್ ಸಿಟಿಸಿ ವಾಯುಯಾನ ತರಬೇತಿ ಕೋರ್ಸ್ ಆರಂಭಿಸಿದರು ಮತ್ತು ಎರಡು ವರ್ಷಗಳ ನಂತರ ಬ್ರಿಟಿಷ್ ಏರ್‌ಲೈನ್ ಸಂಸ್ಥೆ ಈಸಿಜೆಟ್‌ನಲ್ಲಿ ಕ್ಯಾಪ್ಟನ್ ನಂತರದ ಸ್ಥಾನವಾದ ವಿಮಾನದ ಸಹಪೈಲೆಟ್ ಅಥವಾ ಫಸ್ಟ್ ಆಫೀಸರ್ ಆದರು. ಬ್ರಿಟಿಷ್ ಮಹಿಳಾ ಪೈಲೆಟ್ಸ್ ಅಸೋಸಿಯೇಶನ್‌ನ ಜ್ಯೂಲಿ ವೆಸ್ಥ್ರಾಪ್ ಪ್ರಕಾರ ಮೆಕ್‌ವಿಲಿಯಮ್ಸ್ ಸಾಧನೆಯಿಂದ ಇನ್ನಷ್ಟು ಮಂದಿಗೆ ಈ ವೃತ್ತಿಯನ್ನು ಆರಿಸಿಕೊಳ್ಳಲು ಪ್ರೇರಣೆ ಸಿಗಲಿದೆ. “ಪೈಲೆಟ್ ಆಗಿ ನಾಗರಿಕ ವಿಮಾನಯಾನದಲ್ಲೂ ಯಶಸ್ವಿಯಾಗಬಹುದು ಎನ್ನುವುದನ್ನು ಅವರ ಪ್ರಕರಣ ತೋರಿಸಿಕೊಟ್ಟಿದೆ” ಎಂದು ಜ್ಯೂಲಿ ಅಭಿಪ್ರಾಯಪಟ್ಟಿದ್ದಾರೆ.
ಕೃಪೆ: http://edition.cnn.com/