ಜ್ಯೋತಿಷ್ಯದ ಹೆಸರಲ್ಲಿ ಸಾವಿರಾರು ರೂ. ಪಂಗನಾಮ!
ಬೆಳ್ತಂಗಡಿ, ಸೆ.28: ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡುವುದಾಗಿ ಹೇಳಿ ಬೆಳ್ತಂಗಡಿಯ ಸಂತೆ ಕಟ್ಟೆಯಲ್ಲಿರುವ ಜ್ಯೋತಿಷಿಯೊಬ್ಬ ಹಣ ಪಡೆದು ವಂಚಿಸಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸಂಬಂಧ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಾಯಿಲ ನಿವಾಸಿ ರಾಮಪ್ಪಎಂಬವರು ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ. ಸಂತೆಕಟ್ಟೆಯಲ್ಲಿ ‘ಕೊಳ್ಳೆಗಾಲದ ಶ್ರೀದೇವಿ ಆರಾಧಕನ ಜ್ಯೋತಿಷ್ಯಾಲಯ’ ಈ ಜ್ಯೋತಿಷಿ ಕೇಂದ್ರವನ್ನು ಶ್ಯಾಮಸುಂದರ ಶಾಸ್ತ್ರಿ ಎಂಬಾತ ನಡೆಸುತ್ತಿದ್ದ. ಇಲ್ಲಿ ಶ್ಯಾಮಸುಂದರ ಶಾಸ್ತ್ರಿಯ ಅಣ್ಣ ರಾಮಚಂದ್ರ ಎಂಬಾತ ಇರುತ್ತಿದ್ದು ಈತ ಬಂದವರಿಗೆ ಭವಿಷ್ಯ ಹೇಳುತ್ತಿದ್ದ ಎನ್ನಲಾಗಿದೆ. ರಾಮಪ್ಪಅವರ ಕುಟುಂಬ ಕಳೆದ ಕೆಲ ದಿನಗಳಿಂದ ಇಲ್ಲಿಗೆ ಹೋಗುತ್ತಿದ್ದು, ಆಗಾಗ ಹಲವು ಪೂಜೆಗಳ ಹೆಸರಿನಲ್ಲಿ ಅವರಿಂದ ಹಣ ವಸೂಲಿ ಮಾಡುತ್ತಾ ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದಾಗಿ ಈತ ಹೇಳುತ್ತಿದ್ದ ಎನ್ನಲಾಗಿದೆ. ಇದನ್ನು ನಂಬಿದ ರಾಮಪ್ಪ ಸುಮಾರು ಹದಿನಾರು ಸಾವಿರ ರೂ. ಈತನಿಗೆ ನೀಡಿದ್ದಾರೆ. ಈತ ಮತ್ತೆ ಹೆಚ್ಚು ಹಣ ಕೇಳಿದಾಗ ಅದನ್ನು ನೀಡಲು ಅವರು ನಿರಾಕರಿಸಿದಾಗ ದೇವರ ದೋಷ ಬರುತ್ತದೆ ಎಂದು ಬೆದರಿಸಲು ಮುಂದಾಗಿದ್ದಾನೆ. ಈ ವಿಚಾರ ಸ್ಥಳೀಯರಿಗೆ ತಿಳಿದು ಸ್ಥಳೀಯರಾದ ವಸಂತ ರಾಣೇ ಹಾಗೂ ಇತರರು ಈತನಲ್ಲಿಗೆ ತೆರಳಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಹಣ ಹಿಂದಿರುಗಿಸುವುದಾಗಿ ಈತ ಹೇಳಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಬೆಳ್ತಂಗಡಿ ಪೋಲೀಸಗೆ ದೂರು ನೀಡಲಾಗಿದ್ದು ಪೋಲೀಸರು ರಾಮಂದ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಜ್ಯೋತಿಷ್ಯಾಲಯದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸುವುದಾಗಿ ಕರಪತ್ರದ ಮೂಲಕ ಪ್ರಚಾರ ಮಾಡಿರುವುದು ಕಂಡು ಬರುತ್ತಿದೆ. ಇದರಿಂದ ತಾಲೂಕಿನಲ್ಲಿ ಇನ್ನೂ ಹಲವರು ವಂಚಿತರಾಗಿರುವ ಬಗ್ಗೆ ಮಾಹಿತಿಗಳು ಲಭಿಸುತ್ತಿದ್ದು, ಪೋಲೀಸರ ತನಿಖೆಯಿಂದಷ್ಟೇ ಇನ್ನಷ್ಟು ವಂಚನೆ ಪ್ರಕರಣಗಳು ಬೆಳಕಿಗೆ ಬರಬೇಕಿದೆ.