ಮನಪಾಕ್ಕೆ ಬಯಲು ಶೌಚಾಲಯ ಮುಕ್ತ ನಗರ ಪ್ರಮಾಣಪತ್ರ ಹಸ್ತಾಂತರ
ಮಂಗಳೂರು, ಸೆ.28: ಕೇಂದ್ರ ಸರಕಾರದ ನಗರಾಭಿವೃದ್ಧಿ ಇಲಾಖೆ ಮತ್ತು ಸ್ವಚ್ಛ ಭಾರತ ಮಿಷನ್ ವತಿಯಿಂದ ಬಯಲು ಶೌಚಾಲಯ ಮುಕ್ತ ನಗರವೆಂಬ ಘೋಷಣೆಯ ಪ್ರಮಾಣ ಪತ್ರವನ್ನು ಮಂಗಳೂರು ಮಹಾನಗರ ಪಾಲಿಕೆಗೆ ಇಂದು ಹಸ್ತಾಂತರಿಸಲಾಯಿತು.
ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ಮನಪಾ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕ್ವಾಲಿಟಿ ಕಂಟ್ರೋಲ್ ಆಫ್ ಇಂಡಿಯಾದ ಸ್ವಚ್ಛ ಭಾರತ ಮಿಶನ್ ಯೋಜನೆಯ ಮುಖ್ಯಸ್ಥ ಅಭಿನವ್ ಯಾದವ್‌ರವರು ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು. ವಿಶೇಷವೆಂದರೆ, ಈ ಪ್ರಮಾಣ ಪತ್ರವನ್ನು ನೀಡಲಾದ ದಿನಾಂಕದಿಂದ (ಅಂದರೆ ಇಂದಿನಿಂದ) ಆರು ತಿಂಗಳ ಕಾಲ ಇದು ಅರ್ಹವಾಗಿರುತ್ತದೆ. ಬಳಿಕ ಸ್ವಚ್ಛತೆಯ ಮಾನದಂಡಗಳನ್ನು ನಿರ್ವಹಿಸದಿದ್ದಲ್ಲಿ ಪ್ರಮಾಣಪತ್ರ ಅನೂರ್ಜಿತಗೊಳ್ಳಲಿದೆ. ದೇಶದಲ್ಲಿರುವ ಒಂದು ಲಕ್ಷದಿಂದ ಐದು ಲಕ್ಷ ಜನಸಂಖ್ಯೆಯ ನಗರಗಳ ಪೈಕಿ ಮಂಗಳೂರು ನಗರವು ದೇಶದಲ್ಲೇ ಪ್ರಥಮ ಬಯಲು ಶೌಚಾಲಯ ಮುಕ್ತ ನಗರವಾಗಿ ಘೋಷಣೆಗೊಳಪಟ್ಟಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿರಿದ್ದ ಸಂಸದ ನಳಿನ್ ಕುಮಾರ್ ಮಾತನಾಡಿ, ಹಿಂದೆ ರಾಷ್ಟ್ರದಲ್ಲಿ ಪ್ರಥಮವಾಗಿ ನಿರ್ಮಲ ಗ್ರಾಮ ಯೋಜನೆ ಘೋಷಣೆಯ ವೇಳೆ ದಕ್ಷಿಣ ಕನ್ನಡ ಪ್ರಥಮ ಜಿಲ್ಲೆಯಾಗಿ ಈ ಪುರಸ್ಕಾರವನ್ನು ಪಡೆದುಕೊಂಡಿತ್ತು. ಇದೀಗ ದೇಶದಲ್ಲೇ ಮಂಗಳೂರು ಬಯಲು ಶೌಚಾಲಯ ಮುಕ್ತ ನಗರವಾಗಿ ಹೊರಹೊಮ್ಮುವ ಮೂಲಕ ಗ್ರಾಮಾಂತರ ಹಾಗೂ ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆ ಹಿರಿಮೆಯನ್ನು ದೇಶಕ್ಕೆ ಸಾರಿದೆ ಎಂದರು.
ಈ ಗೌರವವನ್ನು ಪಡೆಯುವಲ್ಲಿ ಮನಪಾ ಆಡಳಿತ, ವಿಪಕ್ಷ ಹಾಗೂ ಸಾರ್ವಜನಿಕ ಸಹಕಾರವೂ ಮಹತ್ವದ್ದಾಗಿದ್ದು, ರಾಜಕಾರಣ ಮಾಡದೆ ಮುನ್ನಡೆದಾಗ ಮಾತ್ರವೇ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದವರು ಹೇಳಿದರು. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಮಹಾತ್ಮಗಾಂಧಿಯವರು ರಾಮರಾಜ್ಯದ ಕನಸು ಸ್ವಚ್ಛ ಭಾರತದ ಕುರಿತಂತೆ ಕಂಡದ್ದಾಗಿತ್ತು. ಗ್ರಾಮಾಭಿವೃದ್ಧಿಯ ಮೂಲಕ ರಾಷ್ಟ್ರದ ಪರಿಕಲ್ಪನೆಗೆ ನಾಂದಿ ಹಾಡಿದ್ದ ಮಹಾತ್ಮ ಗಾಂಧಿಯವರ ಕನಸನ್ನು ಸಾಕಾರಗೊಳಿಸುವತ್ತ ದೇಶ ಹೆಜ್ಜೆ ಇರಿಸುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ನುಡಿದರು.
ನಾನು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸುವ ಮನಪಾಕ್ಕೆ ಸಲ್ಲಿಕೆಯಾಗಿ ಬಾಕಿ ಇದ್ದ 339 ಶೌಚಾಲಯಗಳಿಗೆ ಅರ್ಜಿಗಳನ್ನು ಆದ್ಯತೆಯ ನೆಲೆಯಲ್ಲಿ ವಿಲೇವಾರಿ ಮಾಡಲಾಯಿತು ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್ ಅಭಿಪ್ರಾಯಿಸಿದರು.
ಕೇಂದ್ರದ ನಗರಾಭಿವೃದ್ಧಿ ಸಚಿವಾಲಯ ಹಾಗೂ ಸ್ವಚ್ಛ್ ಭಾರತ್ ಮಿಶನ್‌ನಡಿ ಹಲವಾರು ರೀತಿಯ ತಪಾಸಣೆ, ಮೇಲ್ವಿಚಾರಣೆ, ಸಂದರ್ಶನ, ಭೇಟಿ ಕಾರ್ಯಕ್ರಮಗಳ ಮೂಲಕ ಮಂಗಳೂರು ನಗರವನ್ನು ಬಯಲು ಶೌಚಾಲಯ ಮುಕ್ತ ನಗರವಾಗಿ ಘೋಷಣೆ ಮಾಡಲಾಗಿದೆ. ಇದಕ್ಕಾಗಿ ನಗರದ ಎಲ್ಲಾ ವಾರ್ಡ್‌ಗಳ ಶಾಲೆಗಳು, ಸಾರ್ವಜನಿಕ ಸ್ಥಳಗಳು, ಮಾರುಕಟ್ಟೆಗಳು, ಕೊಳಚೆ ಪ್ರದೇಶಗಳನ್ನು ವೈಯಕ್ತಿಕವಾಗಿ ತಪಾಸಣೆಯನ್ನೂ ನಡೆಸಲಾಗಿದೆ ಎಂದು ಪ್ರಮಾಣ ಪತ್ರ ಹಸ್ತಾಂತರಿಸಿದ ಅಭಿನವ್ ಯಾದವ್ ಹೇಳಿದರು.
ಮನಪಾ ಆಯುಕ್ತ ಮುಹಮ್ಮದ್ ನಝೀರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಉಪ ಮೇಯರ್ ಸುಮಿತ್ರ ಕರಿಯ ಉಪಸ್ಥಿತರಿದ್ದರು. ಪರಿಸರ ಅಭಿಯಂತರ ಮಧು ಕಾರ್ಯಕ್ರಮ ನಿರೂಪಿಸಿದರು. ಮನಪಾ ಉಪ ಆಯುಕ್ತ ಗೋಕುಲ್‌ದಾಸ್ ನಾಯಕ್ ವಂದಿಸಿದರು.
ಸ್ವಚ್ಛತೆಯ ಪ್ರಮಾಣ ಪತ್ರಕ್ಕೆ ಪ್ರಭಾವ ಬೀರಿಲ್ಲ!
ದೇಶದಲ್ಲೇ ಮಂಗಳೂರು ನಗರ ಬಯಲು ಶೌಚಾಲಯ ಮುಕ್ತ ನಗರವಾಗಿ ಪ್ರಮಾಣ ಪತ್ರವನ್ನು ಯಾವುದೇ ರೀತಿಯ ಪ್ರಭಾವ ಬೀರಿ ಪಡೆದಿರುವುದಲ್ಲ. ಸ್ವಚ್ಛತೆಯ ಕುರಿತಂತೆ ತಜ್ಞರ ನಿರ್ದಿಷ್ಟ ಮಾನದಂಡಗಳು, ನಿಯಮಗಳನ್ನು ಪಾಲನೆ ಮಾಡುವ ಮೂಲಕ ಮಂಗಳೂರು ನಗರಕ್ಕೆ ಈ ಗೌರವ ದೊರಕಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಸುಲಭ್ ಶೌಚಾಲಯಗಳನ್ನು ಹೆಚ್ಚಿಸಬೇಕಿದೆ: ಐವನ್ ಡಿಸೋಜ
ಈಗಾಗಲೇ ಹಲವಾರು ಸ್ತರಗಳಲ್ಲಿ ಅಭಿವೃದ್ದಿಯಲ್ಲಿ ಮುಂಚೂಣಿಯಲ್ಲಿರುವ ಮಂಗಳೂರು ನಗರವು ಬಯಲು ಶೌಚಾಲಯ ಮುಕ್ತ ನಗರವಾಗಿ ಘೋಷಣೆಗೊಂಡಿರುವುದು ಸಂತಸದ ವಿಚಾರ. ಇದೀಗ ನಗರದ ಜನಸಂಖ್ಯೆಗೆ ಅನುಗುಣವಾಗಿ ಸುಲಭ್ ಶೌಚಾಲಯಗಳ ಸಂಖ್ಯೆಯನ್ನು ನಗರದಲ್ಲಿ ಹೆಚ್ಚಿಸಿ ಅವುಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ಅಭಿಪ್ರಾಯಿಸಿದರು.