×
Ad

ಅಖ್ಲಾಕ್ ಕುಟುಂಬ ಗೋಹತ್ಯೆ ಮಾಡಿತ್ತೆನ್ನುವುದಕ್ಕೆ ಸಾಕ್ಷ್ಯವಿಲ್ಲ: ಪೊಲೀಸರು

Update: 2016-09-28 18:59 IST

ಲಕ್ನೋ: ದಾದ್ರಿಯಲ್ಲಿ ಮತಾಂಧ ಗುಂಪಿನಿಂದ ಬರ್ಬರವಾಗಿ ಹತ್ಯೆಯಾಗಿದ್ದ ಮೊಹಮ್ಮದ್ ಅಖ್ಲಾಕ್ ಮತ್ತು ಅವರ ಕುಟುಂಬದವರು ಗೋಹತ್ಯೆಯನ್ನು ಮಾಡಿದ್ದರು ಎನ್ನುವುದಕ್ಕೆ ಯಾವುದೇ ಸಾಕ್ಷಾಧಾರವಿಲ್ಲ ಎಂದು ಉತ್ತರ ಪ್ರದೇಶ ಪೊಲೀಸರು ಸ್ಪಷ್ಟ ಪಡಿಸಿದ್ದಾರೆ. ಅಖ್ಲಾಕ್ ಕುಟುಂಬದವರ ವಿರುದ್ಧ ದಾಖಲಾಗಿದ್ದ ಗೋಹತ್ಯೆ ಪ್ರಕರಣದಲ್ಲಿ ಅವರನ್ನು ಬಂಧಿಸದಂತೆ ಅಲಹಾಬಾದ್ ಉಚ್ಚ ನ್ಯಾಯಾಲಯವು ತಿಂಗಳ ಹಿಂದೆ ತಡೆಯಾಜ್ಞೆ ನೀಡಿತ್ತು.

ಪೊಲೀಸರು ಸುರಾಜಪುರ ನ್ಯಾಯಾಲಯದಲ್ಲಿ ಮುಕ್ತಾಯ ವರದಿಯನ್ನು ಸಲ್ಲಿಸುವ ಸಾಧ್ಯತೆಯಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾಗಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಅಖ್ಲಾಕ್‌ರ ಸೋದರ ಜಾನ್ ಮೊಹಮ್ಮದ್ ಕರುವೊಂದರ ಕತ್ತನ್ನು ಸೀಳುತ್ತಿದ್ದನ್ನು ತಾವು ನೋಡಿದ್ದಾಗಿ ಹೇಳಿಕೊಂಡ ದಾದ್ರಿಯ ಬಿಸಾಡಾ ಗ್ರಾಮದ ನಿವಾಸಿಗಳು ದೂರನ್ನು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ನೊಯ್ಡೆದ ನ್ಯಾಯಾಲಯವೊಂದು ಕಳೆದ ಜುಲೈನಲ್ಲಿ ಅಖ್ಲಾಕ್ ಕುಟುಂಬದ ವಿರುದ್ಧ ಪ್ರಕರಣವನ್ನು ದಾಖಲಿಸುವಂತೆ ಉತ್ತರ ಪ್ರದೇಶ ಪೊಲೀಸರಿಗೆ ಸೂಚಿಸಿತ್ತು. ಇದರ ವಿರುದ್ಧ ಅಖ್ಲಾಕ್ ಕುಟುಂಬವು ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿತ್ತು.

ತನಿಖಾಧಿಕಾರಿಗಳು ಹಲವರು ಬಾರಿ ಗ್ರಾಮಕ್ಕೆ ಭೇಟಿ ನೀಡಿದ್ದರೂ ಗೋಹತ್ಯೆ ನಡೆದಿದ್ದಕ್ಕೆ ಯಾವುದೇ ಸಾಕ್ಷಾಧಾರಗಳು ಸಿಕ್ಕಿರಲಿಲ್ಲ ಎಂದು ವರದಿಯು ಹೇಳಿದೆ.

ಗೋಹತ್ಯೆ ನಡೆದಿತ್ತೆನ್ನಲಾದ ಇಡೀ ಪ್ರದೇಶವನ್ನು ವಿಧಿವಿಜ್ಞಾನ ತಜ್ಞರ ತಂಡ ಜಾಲಾಡಿದ್ದರೂ ಪ್ರಾಣಿರಕ್ತದ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ಜು.15ರಂದು ಪ್ರಕರಣ ದಾಖಲಾಗಿದ್ದ ಜಾರ್ಚಾ ಪೊಲೀಸ್ ಠಾಣೆಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಅಖ್ಲಾಕ್ ಕುಟುಂಬದ ವಿರುದ್ಧ ಸಲ್ಲಿಸಲಾದ ದೂರಿನಲ್ಲಿ ಲೋಪಗಳಿದ್ದು ಇವುಗಳನ್ನು ಮುಕ್ತಾಯ ವರದಿಯಲ್ಲಿ ಕಾಣಿಸಲಾಗುವುದು ಎಂದು ತನಿಖಾ ತಂಡದ ಸದಸ್ಯರೋರ್ವರು ತಿಳಿಸಿದ್ದಾರೆ.

ಈದ್ ಸಂದರ್ಭದಲ್ಲಿ ಅಖ್ಲಾಕ್ ಮತ್ತು ಕುಟುಂಬದವರು ಗೋಹತ್ಯೆ ಮಾಡಿದ್ದಾರೆ ಮತ್ತು ಗೋಮಾಂಸವನ್ನು ಭಕ್ಷಿಸಿದ್ದಾರೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ 2015, ಸೆಪ್ಟೆಂಬರ್‌ನಲ್ಲಿ ಗುಂಪೊಂದು ಅಖ್ಲಾಕ್‌ರನ್ನು ಥಳಿಸಿ ಹತ್ಯೆಗೈದಿತ್ತು. ಅವರ ಪುತ್ರನನ್ನೂ ಗುಂಪು ಮಾರಣಾಂತಿಕವಾಗಿ ಥಳಿಸಿತ್ತು.

ಅಖ್ಲಾಕ್ ನಿವಾಸದಲ್ಲಿ ಪತ್ತೆಯಾಗಿದ್ದ ಮಾಂಸವು ದನದ್ದು ಅಥವಾ ಅದೇ ತಳಿಯದ್ದು ಎಂದು ವಿಧಿವಿಜ್ಞಾನ ವರದಿಯೊಂದು ಮೇ ತಿಂಗಳಲ್ಲಿ ಹೇಳಿತ್ತು. ಈ ವರದಿಯು ಕೊಲೆ ಅಪರಾಧ ಪ್ರಕರಣದ ಗಂಭೀರತೆಯನ್ನು ತಗ್ಗಿಸುವುದಿಲ್ಲ ಎಂದು ಉ.ಪ್ರದೇಶ ಪೊಲೀಸ್ ವರಿಷ್ಠ ಜಾವೇದ್ ಅಹ್ಮದ್ ಹೇಳಿದ್ದರು. ಉತ್ತರ ಪ್ರದೇಶದಲ್ಲಿ ಗೋಮಾಂಸ ಸೇವನೆ ಅಪರಾಧವಲ್ಲ,ಗೋಹತ್ಯೆ ಮಾತ್ರ ಅಪರಾಧವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News