ಕಡಬ:ಠಾಣೆಯೆದುರು ಕೆಎಸ್ಸಾರ್ಟಿಸಿ ನಿರ್ವಾಹಕನ ಶವವಿಟ್ಟು ಆಕ್ರೋಶ ವ್ಯಕ್ತಪಡಿಸಿದ ಸಂಬಂಧಿಕರು
ಕಡಬ, ಸೆ.28: ಸುಬ್ರಹ್ಮಣ್ಯ ಸಮೀಪದ ಕುಮಾರಧಾರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೆಎಸ್ಸಾರ್ಟಿಸಿ ನಿರ್ವಾಹಕ ದೇವದಾಸ್ ಎಂಬವರ ಶವವು ಬುಧವಾರ ಕುಮಾರಧಾರಾ ಸೇತುವೆಯಿಂದ ಸುಮಾರು ಎರಡು ಕಿ.ಮೀ. ಕೆಳಗಡೆ ಬಟ್ಟಕಯ ಎಂಬಲ್ಲಿ ದೊರೆತಿದ್ದು, ಮೃತರಿಗೆ ರವಿವಾರ ಕಡಬ ಠಾಣೆಯಲ್ಲಿ ಹಲ್ಲೆಗೈಯಲಾಗಿದೆ ಎಂದು ಆರೋಪಿಸಿ ಕುಟುಂಬಿಕರು ಮೃತದೇಹವನ್ನು ಕಡಬ ಠಾಣೆಯ ಮುಂಭಾಗದಲ್ಲಿಟ್ಟು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಚಿಲ್ಲರೆ ನೀಡುವ ವಿಚಾರದಲ್ಲಿ ಯುವತಿಯೋರ್ವಳ ಹಾಗೂ ಬಸ್ಸು ನಿರ್ವಾಹಕ ದೇವದಾಸ್ ಮಧ್ಯೆ ವಾಗ್ವಾದ ನಡೆದು, ಬಳಿಕ ವಿಚಾರ ಕಡಬ ಠಾಣೆಯ ಮೆಟ್ಟಿಲೇರಿತ್ತು. ಕಡಬ ಠಾಣೆಯಲ್ಲಿ ದೇವದಾಸ್‌ರನ್ನು ವಿಚಾರಣೆ ನಡೆಸಿ ಅವರ ಕೈಯಲ್ಲಿದ್ದ ಹೆಚ್ಚುವರಿ 400 ರೂ.ಗಳನ್ನು ತೆಗೆದು ಯುವತಿಯ ಕೈಗೆ ನೀಡಿ, ಇಬ್ಬರನ್ನೂ ವಾಪಸ್ ಕಳುಹಿಸಲಾಗಿತ್ತು ಎನ್ನಲಾಗಿದೆ. ಇದರಿಂದ ಅವಮಾನಗೊಂಡ ದೇವದಾಸ್ ಡೆತ್‌ನೋಟ್ ಬರೆದಿಟ್ಟು ಕುಮಾರಧಾರಾ ನದಿಗೆ ಹಾರುವ ಮೂಲಕ ಆತ್ಮಹತ್ಯೆಗೈದಿದ್ದರು.
ಶವವನ್ನು ಸುಬ್ರಹ್ಮಣ್ಯದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕಡಬ ಠಾಣೆಗೆ ತೆಗೆದುಕೊಂಡು ಬಂದು ಆಂಬ್ಯುಲೆನ್ಸನ್ನು ಠಾಣೆಯ ಮುಂಭಾಗದಲ್ಲಿಟ್ಟು ಮೃತರ ಮಗನಾದ ಪವನ್, ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದಭರ್ದಲ್ಲಿ ಪುತ್ತೂರು ಎಎಸ್ಪಿ ರಿಷ್ಯಂತ್ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ಉನ್ನತ ಅಧಿಕಾರಿಗಳಿಂದ ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ ಬಳಿಕ ಮೃತದೇಹವನ್ನು ಕೊಂಡೊಯ್ಯಲಾಯಿತು.
ಪುತ್ತೂರು ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ಅನಿಲ್ ಕುಲಕರ್ಣಿ, ಡಿಸಿಐಬಿ ಇನ್‌ಸ್ಪೆಕ್ಟರ್ ಅಮಾನುಲ್ಲಾ, ಸುಳ್ಯ ಇನ್‌ಸ್ಪೆಕ್ಟರ್ ಕೃಷ್ಣಯ್ಯ, ಸುಳ್ಯ ಸಬ್‌ಇನ್‌ಸ್ಪೆಕ್ಟರ್ ಚಂದ್ರಶೇಖರ, ಸಂಪ್ಯ ಸಬ್‌ಇನ್‌ಸ್ಪೆಕ್ಟರ್ ಖಾದರ್, ಬಂಟ್ವಾಳ ಟ್ರಾಫಿಕ್ ಸಬ್ ಇನ್‌ಸ್ಪೆಕ್ಟರ್ ರತನ್ ಹಾಗೂ ಸಿಬ್ಬಂದಿ ಸ್ಥಳದಲ್ಲಿದ್ದರು.