×
Ad

ಕೋಮುಹಿಂಸೆಗೆ ದ್ವೇಷ ರಾಜಕಾರಣವೇ ಕಾರಣ: ಆಲ್ಬನ್ ರೊಡ್ರಿಗಸ್

Update: 2016-09-28 20:09 IST

ಉಡುಪಿ, ಸೆ.28: ಬಾಬರಿ ಮಸೀದಿ ಧ್ವಂಸ, ಗುಜರಾತ್ ನರಮೇಧ, ಮಂಗಳೂರಿನಲ್ಲಿ ಕ್ರೈಸ್ತರ ದೇವಾಲಯಗಳ ಮೇಲೆ ದಾಳಿ ಹಾಗೂ ಗೋವಿನ ಹೆಸರಿನಲ್ಲಿ ನಡೆಸುತ್ತಿರುವ ಹಿಂಸೆಗಳಿಗೆ ಧ್ವೇಷ ರಾಜಕಾರಣವೇ ಕಾರಣ ಎಂದು ಕಾಪು ದಂಡತೀರ್ಥ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್ ಆರೋಪಿಸಿದ್ದಾರೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ‘ದ್ವೇಷ ರಾಜಕಾರಣ ನಿಲ್ಲಿಸಿ’ ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ಉಡುಪಿ ಜಿಲ್ಲಾ ಘಟಕದ ವತಿ ಯಿಂದ ಬುಧವಾರ ಉಡುಪಿ ದುರ್ಗಾ ಇಂಟರ್‌ನ್ಯಾಶನಲ್ ಹೊಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಮನುಷ್ಯರು ತಿನ್ನುವ ಆಹಾರ ಪದ್ಧತಿಯ ಬಗ್ಗೆ ರಾಜಕಾರಣ ಮಾಡು ವುದು ಸರಿಯಲ್ಲ. ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ, ಕ್ರಿಶ್ಚಿಯನ್ನರು ಇಸ್ರೇಲ್‌ಗೆ ಹೋಗಲಿ ಎಂದು ಕೇಂದ್ರ ಸಚಿವರೊಬ್ಬರು ಹೇಳುತ್ತಿದ್ದಾರೆ. ಹಾಗಾದರೆ ಈ ದೇಶಕ್ಕೆ ನಾವು ಏನು ಕೊಡುಗೆ ನೀಡಿಲ್ಲವೇ ಎಂದು ಅವರು ಪ್ರಶ್ನಿಸಿದರು.
ಇಂದಿನ ಈ ಪರಿಸ್ಥಿತಿಯನ್ನು ಅವಲೋಕಿಸುವಾಗ ಮುಂದಿನ ದಿನಗಳು ಅಲ್ಪಸಂಖ್ಯಾತರಿಗೆ ಒಳ್ಳೆಯ ದಿನ ಆಗಿರುವುದಿಲ್ಲ. ಇದರ ವಿರುದ್ಧ ಹೋರಾ ಡಲು ಇರುವ ಅಸ್ತ್ರ ಅಂದರೆ ಚುನಾವಣೆ ಮಾತ್ರ. ನಾವು ಹಿಂಸೆಯನ್ನು ಹಿಂಸೆಯಿಂದ ಎದುರಿಸದೆ ಜನರನ್ನು ವಿದ್ಯಾವಂತರನ್ನಾಗಿಸಿ ಜನಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಬೇಕು ಎಂದರು.

ಕಾಂಗ್ರೆಸ್ ಮುಕ್ತ ಭಾರತ ಮಾಡುವುದೇ ನಮ್ಮ ಗುರಿ ಎಂದು ಹೇಳುತ್ತಿ ರುವ ಬಿಜೆಪಿ, ಹಾಗಾದರೆ ಜನರ ಮತ ಗಳಿಸಿ ಅಧಿಕಾರಕ್ಕೆ ಬಂದಿರುವುದು ಧ್ವೇಷ ರಾಜಕಾರಣಕ್ಕಾಗಿಯೇ ಹೊರತು ದೇಶದ ಅಭಿವೃದ್ಧಿಗಾಗಿ ಅಲ್ಲ ಎಂಬುದು ಇದರಿಂದ ತಿಳಿಯುತ್ತದೆ ಎಂದು ಅವರು ಟೀಕಿಸಿದರು.

ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮಾತನಾಡಿ, ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸೆಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಪ್ರಧಾನ ಮಂತ್ರಿ ಅಸಹಾಯಕತೆಯ ಮಾತನ್ನು ಆಡುತ್ತಿದ್ದಾರೆ. ಹಾಗಾಗಿ ಈ ದೇಶದ ನಿಯಂತ್ರಣ ಆರೆಸ್ಸೆಸ್ ಮುಖಂಡ ಮೋಹನ್ ಭಾಗವತರ ಕೈಯಲ್ಲಿದೆಯೇ ಹೊರತು ಪ್ರಧಾನ ಮಂತ್ರಿಯ ಕೈಯಲ್ಲಿ ಅಲ್ಲ ಎಂಬುದು ಗೊತ್ತಾಗುತ್ತದೆ ಎಂದು ದೂರಿದರು.

ಇವರಿಗೆ ಗೋವಿನ ಮೇಲಿನ ನಿಜವಾದ ಪ್ರೀತಿ ಇದ್ದರೆ ಮೊದಲು ಗೋ ಮಾಂಸ ರಫ್ತನ್ನು ನಿಲ್ಲಿಸಲಿ. ಯುಪಿಎ ಸರಕಾರದ ಅವಧಿಯಲ್ಲಿ ಗೋ ಮಾಂಸ ರಫ್ತಿನಲ್ಲಿ ಎರಡನೆ ಸ್ಥಾನದಲ್ಲಿದ್ದ ಭಾರತ, ಮೋದಿ ಆಡಳಿತದಲ್ಲಿ ಮೊದಲನೆ ಸ್ಥಾನಕ್ಕೆ ಬಂದಿದೆ. ಗೋವು ಇವರಿಗೆ ಬೇಕಾಗಿರುವುದು ಪೂಜೆಗೆ ಅಲ್ಲ, ತಮ್ಮ ರಾಜಕೀಯ ಲಾಭಕ್ಕಾಗಿ ಹಾಗೂ ಚುನಾವಣೆಯಲ್ಲಿ ಸೀಟು ಗೆಲ್ಲಲು ಎಂದು ಅವರು ಟೀಕಿಸಿದರು.

ಪಿಎಫ್‌ಐ ಜಿಲ್ಲಾಧ್ಯಕ್ಷ ಫಝೀಲ್ ಅಹ್ಮದ್ ಉಪಸ್ಥಿತರಿದ್ದರು. ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಲಂ ಬ್ರಹ್ಮಾವರ ಸ್ವಾಗತಿಸಿದರು. ಹನೀಫ್ ಮೂಳೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News