ಆತ್ಮಹತ್ಯೆ ಮಾಡಿದ ಐಎಎಸ್ ಅಧಿಕಾರಿಯ ಡೆತ್ ನೋಟ್ ನಲ್ಲಿ ಅಮಿತ್ ಷಾ ಹೆಸರು !

Update: 2016-09-28 15:00 GMT

ಹೊಸದಿಲ್ಲಿ, ಸೆ. 28 : ಇತ್ತೀಚಿಗೆ ತನ್ನ ಪುತ್ರನ ಜೊತೆ ಆತ್ಮಹತ್ಯೆ ಮಾಡಿಕೊಂಡ ಕಾರ್ಪೊರೇಟ್ ವ್ಯವಹಾರಗಳ  ಮಾಜಿ ಮಹಾ ನಿರ್ದೇಶಕ ಬಿ. ಕೆ. ಬನ್ಸಲ್ ಅವರ ಡೆತ್ ನೋಟ್ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪತ್ನಿ ಹಾಗು ಪುತ್ರಿ ತಮ್ಮ ಫ್ಲ್ಯಾಟ್ ನಲ್ಲಿ ನೇಣಿಗೆ ಶರಣಾದ ಎರಡು ತಿಂಗಳ ಬಳಿಕ ಬನ್ಸಲ್ ತಮ್ಮ ಪುತ್ರನ ಜೊತೆ ಸಾವಿಗೆ ಶರಣಾಗಿದ್ದಾರೆ. 

ಸಾವಿಗೆ ಮೊದಲು ತಂದೆ, ಮಗ ಇಬ್ಬರೂ ಪ್ರತ್ಯೇಕ ಡೆತ್ ನೋಟ್ ಬರೆದಿದ್ದು ಸಿಬಿಐ ದಾಳಿಯಿಂದ ನಾವು ತೀವ್ರ ಅವಮಾನಿತರಾಗಿದ್ದು ಬದುಕಲು ಬಯಸಿಲ್ಲ ಎಂದು ಹೇಳಿದ್ದಾರೆ. ಆದರೆ ಅವರ ಡೆತ್ ನೋಟ್ ನಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ಹೆಸರು ಇರುವುದು ಚರ್ಚೆಗೆ ಗ್ರಾಸವಾಗಿದೆ. 

ತಮ್ಮ ಡೆತ್ ನೋಟ್ ನ ನಾಲ್ಕನೇ ಪುಟದಲ್ಲಿ " ಡಿಐಜಿ ಸಂಜೀವ್ ಗೌತಮ್, ಇಬ್ಬರು ಮಹಿಳಾ ಅಧಿಕಾರಿಗಳು ಹಾಗು ಹವಾಲ್ದಾರ್ ರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿದರೆ ಸತ್ಯ ಹೊರಬರುತ್ತದೆ. ಡಿಐಜಿ ಒಮ್ಮೆ ಹೇಳಿದ್ದರು, " ನಾನು ಅಮಿತ್ ಷಾ ಅವರ ಜನ, ನನ್ನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ನಿನ್ನ ಪತ್ನಿ ಹಾಗು ಮಗಳಿಗೆ ನಾನು ಏನು ಮಾಡುತ್ತೇನೆಂದು ಕೇಳಿದರೆ ಜನರು ನಡುಗಿಬಿಡಬೇಕು..." 

" ಬನ್ಸಲ್ ಹಾಗು ಅವರ ಪುತ್ರ ಯೋಗೇಶ್ ಬನ್ಸಲ್ ಬರೆದ ಕೈಬರಹದ ಡೆತ್ ನೋಟ್ ಅನ್ನು ನಾವು ದೆಹಲಿ ಪೊಲೀಸರಿಂದ ಪಡೆದಿದ್ದೇವೆ. ಪ್ರಕರಣವನ್ನು ಪರಿಶೀಲಿಸಿದ್ದು ಆರೋಪಗಳ ಕುರಿತು ತನಿಖೆ ನಡೆಸಲಿದ್ದೇವೆ. ನಿಯಮ ಉಲ್ಲಂಘನೆ ಕಂಡು ಬಂದರೆ ಸಿಬಿಐ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು " ಎಂದು ಸಿಬಿಐ ಹೇಳಿದೆ ಎಂದು ಸಿಬಿಐ ಹೇಳಿಕೆಯನ್ನು ಉಲ್ಲೇಖಿಸಿ ಎನ್ ಡಿಟಿವಿ ವರದಿ ಮಾಡಿದೆ. 

ಪ್ರತಿಷ್ಠಿತ ಫಾರ್ಮಾ ಕಂಪೆನಿಯೊಂದರಿಂದ ಲಂಚ ಪಡೆದ ಆರೋಪದ ಮೇಲೆ ಆಗ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ಅಪರ ಕಾರ್ಯದರ್ಶಿ ಮಟ್ಟದ ಅಧಿಕಾರಿಯಾಗಿದ್ದ ಬನ್ಸಲ್ ಅವರನ್ನು ಜುಲೈ 16 ರಂದು ಬಂಧಿಸಲಾಗಿತ್ತು. 

ಅಮಿತ್ ಷಾ ಹೆಸರು ಡೆತ್ ನೋಟ್ ನಲ್ಲಿ ಬಂದಿರುವುದನ್ನು ಪ್ರಸ್ತಾಪಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ಬಗ್ಗೆ ವಿವರಣೆ ನೀಡುವಂತೆ ಬಿಜೆಪಿಯನ್ನು ಆಗ್ರಹಿಸಿದ್ದಾರೆ. ಆದರೆ ಇದನ್ನು " ಆಧಾರರಹಿತ " ಎಂದಿರುವ ಬಿಜೆಪಿ ವಕ್ತಾರೆ ಶೈನಾ ಅವರು ಪಕ್ಷಕ್ಕೆ ಸಂಬಂಧಿಸಿಲ್ಲದ ವಿಷಯದಲ್ಲಿ ಪಕ್ಷವನ್ನು ಎಳೆಯಬೇಡಿ ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News