ಸಾಲದ ಮೊತ್ತ ಪಾವತಿಸಿದ್ದರೂ ಬೆದರಿಕೆ: ದೂರು ದಾಖಲು
ಮಂಗಳೂರು, ಸೆ. 28: ಸಾಲದ ಹಣವನ್ನು ಬಡ್ಡಿ ಸಮೇತ ಪಾವತಿಸಿದ್ದರೂ ಹೆಚ್ಚಿನ ಹಣವನ್ನು ಪಾವತಿಸುವಂತೆ ಬೆದರಿಕೆ ಒಡ್ಡಿರುವ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೇರಳಕಟ್ಟೆ ನಿವಾಸಿ ಶರೀಫ್ ಎಂಬವರು ನಗರದ ಮೋತಿಮಹಲ್ ಪಾರ್ಕ್‌ನಲ್ಲಿ ಬಾಡಿಗೆ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು. 2012ರಲ್ಲಿ ಹಂಪನಕಟ್ಟೆಯ ಮಿಲಾಗ್ರಿಸ್ ಮ್ಯಾನ್ಸನ್‌ನಲ್ಲಿರುವ ವೆಸ್ಟರ್ನ್ ಎಕ್ಸ್‌ಚೇಂಜ್ ಎಂಬ ಹೆಸರಿನ ಚಂದ್ರ ಎಂಬವರಿಗೆ ಸೇರಿದ ಖಾಸಗಿ ಹಣಕಾಸು ಸಂಸ್ಥೆಯಿಂದ ಸಾಲ ಪಡೆದಿದ್ದರು. ಈ ಸಂದರ್ಭ ಶರೀಫ್ ಅವರು ಖಾತೆ ಹೊಂದಿದ್ದ ಕಂಕನಾಡಿಯ ಎಮ್.ಸಿ.ಸಿ ಬ್ಯಾಂಕ್‌ನಿಂದ ಶರೀಫ್ ಮತ್ತು ಅವರ ಪತ್ನಿಯವರ ಹೆಸರಿನಲ್ಲಿದ್ದ ಜಾಯಿಂಟ್ ಖಾತೆಯ ತಲಾ 5 ಸಹಿ ಮಾಡಿದ ಖಾಲಿ ಚೆಕ್‌ಗಳನ್ನು ಹಣಕಾಸು ಸಂಸ್ಥೆಯವರು ಪಡೆದುಕೊಂಡಿದ್ದರು. ಜಾಮೀನುದಾರರಾದ ಅಬೂಬಕರ್‌ಸಿದ್ದೀಕ್ ಎಂಬವರ ನಗರದ ಸ್ಟೇಟ್ ಬ್ಯಾಂಕ್ ಬ್ಯಾಂಕ್ ಇಂಡಿಯಾದಲ್ಲಿ ಹೊಂದಿದ ಖಾತೆಯ 5 ಸಹಿ ಮಾಡಿದ ಖಾಲಿ ಚೆಕ್‌ಗಳನ್ನೂ ಪಡೆದುಕೊಂಡಿದ್ದರು.
ಅನಂತರ ಶರೀಫ್ ಅವರು ಕೇಳಿದ್ದ 2 ಲಕ್ಷ ರೂ. ಹಣವನ್ನು ನೀಡುವ ವೇಳೆ ಮೊತ್ತಕ್ಕೆ ಬಡ್ಡಿ 60 ಸಾವಿರ ರೂ. ಬಡ್ಡಿ ಎಂದು ಹೇಳಿ ಕಡಿತಗೊಳಿಸಿ 1,40,000ರೂ. ಮಾತ್ರ ನೀಡಿದ್ದಾರೆ. ಅಲ್ಲದೆ, ಈ ಮೊತ್ತಕ್ಕೆ ತಿಂಗಳಿಗೆ ಬಡ್ಡಿ ಮತ್ತು ಅಸಲು ಸೇರಿ 60,000 ರೂ. ಪಾವತಿಸಬೇಕೆಂದು ಶರತ್ತು ವಿಧಿಸಿ, 100 ರೂ. ಮುಖಬೆಲೆಯ ಖಾಲಿ ಛಾಪಾ ಕಾಗದದಲ್ಲಿ ಹಾಗೂ ಖಾಲಿ ವೋಚರ್‌ಗಳಿಗೆ ಸಹಿ ಪಡೆದುಕೊಂಡಿದ್ದರು ಎಂದು ಶರೀಫ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
ಶರೀಫ್ ಅವರು ಪಡೆದುಕೊಂಡ ಹಣಕ್ಕೆ ಪ್ರತಿಯಾಗಿ ಆರು ತಿಂಗಳಿನಲ್ಲಿ ಬಡ್ಡಿ ಸಮೇತ ಎಲ್ಲಾ ಸಾಲದ ಹಣವನ್ನು ಪಾವತಿ ಮಾಡಿದ್ದು, ನಂತರ ನೀಡಿದ ಚೆಕ್‌ಗಳನ್ನು ಹಿಂತಿರುಗಿಸಲು ಕೇಳಿಕೊಂಡಾಗ ಚೆಕ್‌ಗಳನ್ನು ನೀಡದೇ ಸತಾಯಿಸುತ್ತಾ ಬಂದಿದ್ದಾರೆ. ಸೆಪ್ಟಂಬರ್ 8ರಂದು ತಾನು ಮನೆಯಲ್ಲಿದ್ದಾಗ ಎಂಸಿಸಿ ಬ್ಯಾಂಕ್‌ನವರು ಪೋನ್ ಮಾಡಿ ನೀವು ನೀಡಿದ ಚೆಕ್‌ನಲ್ಲಿ 2,65,000 ರೂ. ಹಣವನ್ನು ನಮೂದಿಸಿದ್ದು ಅಷ್ಟು ಮೊತ್ತ ನಿಮ್ಮ ಅಕೌಂಟ್‌ನಲ್ಲಿ ಇಲ್ಲ ಎಂಬುದಾಗಿ ತಿಳಿಸಿದ್ದಾರೆ. ವೆಸ್ಟರ್ನ್ ಮನಿ ಎಕ್ಸ್‌ಚೇಂಜ್‌ನ ಚಂದ್ರ ಮಾಹಿತಿ ನೀಡದೇ ಚೆಕನ್ನು ದುರುಪಯೋಗಪಡಿಸಿ ಬ್ಯಾಂಕ್‌ಗೆ ಹಾಕಿದ್ದಾರೆ. ಅಲ್ಲದೆ, ಚಂದ್ರ ಅವರು ಅಪರಿಚಿತ ವ್ಯಕ್ತಿಗಳನ್ನು ತನ್ನ ಬಳಿಗೆ ಕಳುಹಿಸಿ ಹಣವನ್ನು ವೆಸ್ಟರ್ನ್ ಮನಿ ಎಕ್ಸ್‌ಚೇಂಜ್‌ಗೆ ಪಾವತಿಸಬೇಕು ಇಲ್ಲದಿದ್ದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿರುವುದಾಗಿ ಶರೀಫ್ ದೂರು ನೀಡಿದ್ದಾರೆ.
ಬಗ್ಗೆ ಮಂಗಳೂರು ಉತ್ತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.