ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅತಿಕ್ರಮಣ ತೆರವಿಗೆ ಆದೇಶ
ಕಾಸರಗೋಡು, ಸೆ.28: ಇಲ್ಲಿನ ನಗರಸಭಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿನ ಅತಿಕ್ರಮಣವನ್ನು ಕೂಡಲೇ ತೆರವುಗೊಳಿಸಲು ಜಿಲ್ಲಾಧಿಕಾರಿ ಕೆ.ಜೀವನ್ ಬಾಬು ರಾಷ್ಟ್ರೀಯ ಹೆದ್ದಾರಿ ಇಲಾಖಾ ಮತ್ತು ನಗರಸಭಾ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ವಿಜಿಲೆನ್ಸ್ ಸಮಿತಿ ಸಭೆಯಲ್ಲಿ ಲಭಿಸಿದ ದೂರನ್ನು ಪರಿಶೀಲಿಸಿದ ಅವರು ಈ ಆದೇಶ ನೀಡಿದರು.
ಪರವಾನಗಿ ಇಲ್ಲದ ಗೂಡಂಗಡಿ, ಫುಟ್‌ಪಾತ್ ಅತಿಕ್ರಮಿಸಿ ವ್ಯಾಪಾರ ಮೊದಲಾದವುಗಳನ್ನು ತೆರವು ಗೊಳಿಸಲು ಆದೇಶಿಸಲಾಯಿತು. ತೆರವುಗೊಳಿಸಿದ ಕ್ರಮದ ಪ್ರಗತಿ ಕುರಿತು ವಾರದೊಳಗೆ ವರದಿ ಸಲ್ಲಿಸಬೇಕು. ಚೆಂಬರಿಕ ಹೊಳೆಯ ಪರಂಬೋಕು, ಬದಿಯಡ್ಕ, ನೀರ್ಚಾಲು, ಕುಂಬಳೆ ಮೊದಲಾಡೆಯಲ್ಲಿ ಅತಿಕ್ರಮಣ ಕುರಿತು ದೂರುಗಳು ಲಭಿಸಿದ್ದು, ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ಆದೇಶ ನೀಡಿದರು. ವಿಜಿಲೆನ್ಸ್ ಡಿವೈಎಸ್ಪಿ ಪಿ.ಕೆ.ರಘುರಾಮನ್, ಜಿಲ್ಲಾ ಹೆಚ್ಚುವರಿ ದಂಡಾಧಿಕಾರಿ ಕೆ.ಅಂಬುಜಾಕ್ಷ ಉಪಸ್ಥಿತರಿದ್ದರು.