×
Ad

ದಂಪತಿಯನ್ನು ಬೆದರಿಸಿ ದರೋಡೆಗೈದ ನಾಲ್ವರು ಆರೋಪಿಗಳ ಬಂಧನ

Update: 2016-09-29 12:24 IST

ಕಾಸರಗೋಡು, ಸೆ.29: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕಡಂಬಾರು ಎಂಬಲ್ಲಿ ಇತ್ತೀಚೆಗೆ ಮನೆಯೊಂದಕ್ಕೆ ನುಗ್ಗಿ ಮನೆಮಂದಿಯನ್ನು ಬೆದರಿಸಿ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕುಂದುಕೊಳಕೆಯ ನಿವಾಸಿ ಮೊಯ್ದಿನ್ ಅನ್ಸಾರ್(23) ಉದ್ಯಾವರ ತೂಮಿನಾಡು ಹಿಲ್‌ಟಾಪ್ ನಗರ ನಿವಾಸಿ ಅಬ್ರ್ರುಹ್ಮಾನ್ ಮುಬಾರಕ್(26), ಉದ್ಯಾವರದ ಮುಹಮ್ಮದ್ ಹನೀಫ್(26), ಮಂಜೇಶ್ವರದ ಇಮ್ತಿಯಾಝ್ (28) ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
 
ಸೆ.9ರಂದು ಮಧ್ಯರಾತ್ರಿ ಕಡಂಬಾರಿನ ರವೀಂದ್ರನಾಥ ಶೆಟ್ಟಿ ಎಂಬವರ ಮನೆಯಿಂದ ಈ ದರೋಡೆ ನಡೆದಿತ್ತು. ರಾತ್ರಿ ಹಠಾತ್ತನೆ ಎಚ್ಚರಗೊಂಡ ರವೀಂದ್ರನಾಥರಿಗೆ ಮನೆಯ ಹೊರಗಿನ ಬಾಗಿಲು ತೆರೆದ ಸ್ಥಿತಿಯಲ್ಲಿದ್ದುದು ಕಂಡು ಬಂದಿತ್ತು. ಕೂಡಲೇ ಎದ್ದ ಅವರು ಬಾಗಿಲ ಬಳಿ ಬರುತ್ತಿದ್ದಂತೆ ಮುಖವನ್ನು ಬಟ್ಟೆಯಲ್ಲಿ ಮರೆಮಾಚಿದ್ದ ನಾಲ್ವರು ಕೊರಳಿಗೆ ಕತ್ತಿ ಹಿಡಿದು ಬೆದರಿಸಿ ಒಳನುಗಿದ್ದರು. ಬಳಿಕ ರವೀಂದ್ರನಾಥ ದಂಪತಿಯನ್ನು ಬೆದರಿಸಿ ಸುಮಾರು 30 ಪವನ್ ಚಿನ್ನಾಭರಣ, 30 ಸಾವಿರ ರೂ. ನಗದನ್ನು ದೋಚಿ ಮನೆಮುಂದೆ ನಿಲ್ಲಿಸಿದ್ದ ರಿಟ್ಝ್ ಕಾರಿನಲ್ಲಿ ಪರಾರಿಯಾಗಿದ್ದರು. ಕಳವುಗೈದ ಕಾರು ಮರುದಿನ ಮಂಗಳೂರಿನ ಪಣಂಬೂರು ಬಳಿ ಪತ್ತೆಯಾಗಿತ್ತು. ಕಾಸರಗೋಡು ಡಿವೈಎಸ್ಪಿ ಎಂ.ವಿ.ಸುಕುಮಾರನ್ ನೇತೃತ್ವದ ವಿಶೇಷ ಪೊಲೀಸ್ ತಂಡ ಈ ದರೋಡೆ ಕೃತ್ಯವನ್ನು ಯಶಸ್ವಿಯಾಗಿ ಬೇಧಿಸಿದೆ. ಬಂಧಿತ ಆರೋಪಿಗಳಿಂದ 22 ಸಾವಿರ ನಗದು, ಒಂದು ಕರಿಮಣಿ ಸರ ಹಾಗೂ ಒಂದು ವಜ್ರದುಂಗರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದ ಚಿನ್ನಾಭರಣವನ್ನು ಆರೋಪಿಗಳು ಮಂಗಳೂರಿನಲ್ಲಿ ಮಾರಾಟ ಮಾಡಿರುವುದಾಗಿ ತಿಳಿದುಬಂದಿದೆ.
ಇದೀಗ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News