ಅ.3ರಂದು ಬ್ಯಾರಿ ಭಾಷಾ ದಿನಾಚರಣೆ: ಬ್ಯಾರಿ ಭಾಷಾ ಸಪ್ತಾಹದ ಅಂಗವಾಗಿ ವಿವಿಧ ಕಾರ್ಯಕ್ರಮಗಳ ಆಯೋಜನೆ
ಮಂಗಳೂರು,ಸೆ.29:ಅ. 3ನ್ನು ಬ್ಯಾರಿ ಭಾಷಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದರಂಗವಾಗಿ ಅ.3 ರಿಂದ ಅ.9 ರವರೆಗೆ ಬ್ಯಾರಿ ಭಾಷಾ ಸಪ್ತಾಹ, ಬ್ಯಾರಿ ಭಾಷಾ ಪ್ರಚಾರ ಅಭಿಯಾನ ಮತ್ತು ವಿವಿಧ ಜಿಲ್ಲೆಗಳಲ್ಲಿ ಪುಸ್ತಕ ಮಾರಾಟ ಜಾಥ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ತಿಳಿಸಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅ.3 ರಂದು ನಗರದ ಅತ್ತಾವರದಲ್ಲಿರುವ ಅಕಾಡೆಮಿಯ ಕಛೇರಿ ಪ್ರಿಸಿಡಿಯಮ್ ಕಾಂಪ್ಲೆಕ್ಸ್‌ನಲ್ಲಿ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮ ನಡೆಯಲಿದ್ದು, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಮ್.ಆರ್. ರಶೀದ್ ಹಾಜಿಯವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ತುಳು ಅಕಾಡೆಮಿಯ ಅಧ್ಯಕ್ಷೆ ಜಾನಕಿ ಎಂ. ಬ್ರಹ್ಮಾವರ ಇವರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸಂಚರಿಸುವ ಬ್ಯಾರಿ ಪುಸ್ತಕ ಮಾರಾಟ ವಾಹನ ಜಾಥಾಕ್ಕೆ ಚಾಲನೆ ನೀಡಲಿರುವರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊರವರು ಬ್ಯಾರಿ ಭಾಷಾ ಪ್ರಚಾರ ಆಂದೋಲನದ ಕರಪತ್ರ ಬಿಡುಗಡೆ ಮಾಡಲಿರುವರು ಎಂದರು.
ಅ.4 ರಂದು ಅಪರಾಹ್ನ 3ಕ್ಕೆ ಪಡುಬಿದ್ರಿಯ ಹೋಟೆಲ್ ಪಲ್ಲವಿಯ ಪಿಂಗಾರ ಸಭಾಂಗಣದಲ್ಲಿ ಅಂತರ್‌ಜಿಲ್ಲಾ ಬ್ಯಾರಿ ಭಾಷಾ ಸಂಗಮ ಕಾರ್ಯಕ್ರಮ, ಅ.5 ರಂದು ಬೆಳಿಗ್ಗೆ 9.30ಕ್ಕೆ ಅತ್ತಾವರದ ಬ್ಯಾರಿ ಅಕಾಡೆಮಿಯ ಕಛೇರಿಯಲ್ಲಿ ಬ್ಯಾರಿ ಗಾದೆ ಮತ್ತು ಬ್ಯಾರಿ ಚುಟುಕು ಸ್ಪರ್ಧೆ ನಡೆಯಲಿದೆ. ಅ.6 ರಂದು ಬೆಳಿಗ್ಗೆ 10 ಗಂಟೆಗೆ ಕಾಸರಗೋಡು ಜಿಲ್ಲೆಯ ಉಪ್ಪಳದ ಬಿ.ಎಸ್.ಎಸ್. ಕಾಲೇಜು ಪ್ರಾಂಗಣದಲ್ಲಿ ಅಂತರ್‌ರಾಜ್ಯ ಕಾರ್ಯಕ್ರಮ,ಅ.7 ರಂದು ಅತ್ತಾವರ ಅಕಾಡೆಮಿಯ ಕಛೇರಿಯಲ್ಲಿ ಅಪರಾಹ್ನ 3 ಗಂಟೆಗೆ ಮಹಿಳೆಯರಿಗೆ ಬ್ಯಾರಿ ಭಾಷೆ ಓದುವ ಸ್ಪರ್ಧೆ, ಅ.8ರಂದು ಅಪರಾಹ್ನ 3ಕ್ಕೆ ಹೋಟೆಲ್ ಶ್ರೀನಿವಾಸ್ ಸಭಾಂಗಣದಲ್ಲಿ ಬ್ಯಾರಿ ಕೂಡುಕೆಟ್ಟ್ ಮತ್ತು ಹಾಜಿ ಬಿ.ಎ. ಮೊದಿನ್‌ರವರೊಂದಿಗೆ ನೇರ ಸಂವಾದ ನಡೆಯಲಿದೆ ಎಂದರು.
ಅ.9 ರಂದು ಅಪರಾಹ್ನ 2:30 ರಿಂದ ಮಂಗಳೂರಿನ ಪುರಭವನದಲ್ಲಿ ಭಾಷಾ ಸಪ್ತಾಹದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಸಮಾರೋಪ ಸಮಾರಂಭದಲ್ಲಿ ಬ್ಯಾರಿ ಹಾಡು, ಸಭಾ ಕಾರ್ಯಕ್ರಮ, ಬ್ಯಾರಿ ಕಾವ್ಯ ಗಾಯನಗೋಷ್ಟಿ, ಬ್ಯಾರಿ ವೈವಾಹಿಕ ವೆಬ್‌ಸೈಟ್ ಉದ್ಘಾಟನೆ, ವಾರ್ತಾ ವೆಬ್‌ಸೈಟ್ ಉದ್ಘಾಟನೆ, ಬ್ಯಾರಿ ಪುರಸ್ಕಾರ, ಬ್ಯಾರಿ ಜಾನಪದ ಕಥಾ ಸಂಕಲನ ಪುಸ್ತಕ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ 9ರ ಮಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮವು ಮಂಗಳೂರು ಆಕಾಶವಾಣಿಯಲ್ಲಿ ಅಪರಾಹ್ನ 3 ರಿಂದ ಸಾಯಂಕಾಲ 6ರವರೆಗೆ ನೇರಪ್ರಸಾರಗೊಳ್ಳಲಿದೆ ಎಂದರು.
ಅಲ್ಲದೆ ಬ್ಯಾರಿ ಭಾಷಾ ಪ್ರಬಂಧ ಸ್ಪರ್ಧೆ, ಬ್ಯಾರಿ ಗಾಯನ ಸ್ಪರ್ಧೆ, ಬ್ಯಾರಿ-ಕಾವ್ಯ ಗಾಯನ ಗೋಷ್ಟಿ, ಬ್ಯಾರಿ ಆಂದೋಲನದಲ್ಲಿ ಗುರುತಿಸಿಕೊಂಡು ಬ್ಯಾರಿ ಭಾಷೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಶ್ರಮಿಸಿದವರಿಗೆ ಬ್ಯಾರಿ ಪುರಸ್ಕಾರ ಮುಂತಾದ ಉಪಯುಕ್ತ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ, ಸದಸ್ಯರಾದ ಯೂಸುಫ್ ವಕ್ತಾರ್, ಅಬ್ದುಲ್ ಹಮೀದ್ ಗೋಳ್ತಮಜಲು,ಅಬ್ದುಲ್ ಲತೀಫ್ ನೇರಳಕಟ್ಟೆ , ಮುಹಮ್ಮದ್ ಝಕರಿಯ ಕಲ್ಲಡ್ಕ ಉಪಸ್ಥಿತರಿದ್ದರು.