ತುಳುಲಿಪಿ ಕಲಿಕೆ ಅತೀ ಅಗತ್ಯ : ದುರ್ಗಾಪ್ರಸಾದ್ ರೈ

Update: 2016-09-29 12:15 GMT

ಪುತ್ತೂರು, ಸೆ.29: ತುಳುಭಾಷೆಯ ಮಹತ್ವನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಇಂದಿನ ಕಾಲದಲ್ಲಿ ತುಳು ಲಿಪಿ ಕಲಿಕೆ ಅತೀ ಅಗತ್ಯವಾಗಿದ್ದು, ತುಳು ಭಾಷೆಯನ್ನು, ಸಾಹಿತ್ಯವನ್ನು ತಿಳಿದುಕೊಂಡು ಅದನ್ನು ಉಳಿಸಿ ಬೆಳೆಸಬೇಕು ಎಂದು ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ದುರ್ಗಾಪ್ರಸಾದ್ ರೈ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ತುಳುಸಂಘ, ಹೆರಿಟೇಜ್ ಕ್ಲಬ್ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ನಡೆದ ‘ತುಳು ಲಿಪಿ ಕಲಿಕಾ ಕಾರ್ಯಾಗಾರ’ವನ್ನು ಗುರುವಾರ ಕಾಲೇಜ್‌ನಲ್ಲಿ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಮಾತನಾಡಿ, ತುಳು ಲಿಪಿ ಮಲೆಯಾಳಂಗಿಂತಲೂ ಪ್ರಾಚೀನವಾಗಿದೆ. ಅದು ಧಾರ್ಮಿಕ ಗ್ರಂಥಗಳ ರಚನೆಗೂ ಉಪಯೋಗಿಸಲ್ಪಡುತ್ತಿತ್ತು. ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವನ್ನು ಪ್ರಸ್ತುತ ವಿದ್ಯಾಸಂಸ್ಥೆಗಳಲ್ಲಿ ತೃತೀಯ ಭಾಷೆಯಾಗಿ ಕಲಿಯಲು ಅವಕಾಶವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಈಗಿನ ಕಾಲದಲ್ಲಿ ತುಳು ಲಿಪಿಯನ್ನು ಬಳಸಿ ಬೆಳೆಸಬೇಕಾದ ಅವಶ್ಯಕತೆಯಿದೆ. ತುಳು ಸಾಹಿತ್ಯ ತುಳುನಾಡ ಚರಿತ್ರೆಯ ಪುನರ್ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ತುಳು ಲಿಪಿ ಕಲಿಕಾಕಾರ ವಿಶ್ರಾಂತ ಕಂದಾಯ ಅಧಿಕಾರಿ ತಮ್ಮಯ್ಯ, ವಿಶ್ರಾಂತ ಗೆಜೆಟ್ ಅಧಿಕಾರಿ ದಿನಕರ್ ಉಪಸ್ಥಿತರಿದ್ದರು. ತುಳು ಸಂಘದ ಸಂಚಾಲಕ ಪ್ರೊ.ನರಸಿಂಹ ಭಟ್ ಸ್ವಾಗತಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ಸ್ವಾತಿ ವಂದಿಸಿದರು. ವಿದ್ಯಾರ್ಥಿ ನಿತಿನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News