×
Ad

ಮೂಡುಬಿದಿರೆ: ಗಾಂಧಿ ವಿಚಾರಧಾರೆ ಕುರಿತು ಅಂತರ್‌ಕಾಲೇಜು ಭಾಷಣ ಸ್ಪರ್ಧೆ

Update: 2016-09-29 17:58 IST

ಮೂಡುಬಿದಿರೆ, ಸೆ.29: ಇಲ್ಲಿನ ಶ್ರೀ ಮಹಾವೀರ ಕಾಲೇಜಿನ ಆಶ್ರಯದಲ್ಲಿ ದಿ. ಎಸ್.ಡಿ. ಸಾಮ್ರಾಜ್ಯ ಸ್ಮರಣಾರ್ಥ 10ನೆ ವರ್ಷದ ಗಾಂಧಿ ವಿಚಾರಧಾರೆ ಕುರಿತ ಮಂಗಳೂರು ವಿವಿ ಮಟ್ಟದ ಅಂತರ್‌ಕಾಲೇಜು ಭಾಷಣ ಸ್ಪರ್ಧೆಯು ಗುರುವಾರ ಕಾಲೇಜಿನ ಸಭಾಭವನದಲ್ಲಿ ನಡೆಯಿತು.

ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಮಹಾತ್ಮಾ ಗಾಂಧಿ ಸತ್ಯಾನ್ವೇಷಣಕಾರರಾಗಿದ್ದರು. ಅವರ ವಿಚಾರಧಾರೆಗಳು, ಅವರು ಜೀವನದಲ್ಲಿ ಅನುಸರಿಸಿದ ಆದರ್ಶಗಳು ಇಂದಿನ ಯುವ ಪೀಳಿಗೆಗೂ ಪ್ರಸ್ತುತವಾಗಿದೆ. ಜಗತ್ತಿನಲ್ಲಿ ಇಂದು ಗೊಂದಲ, ಹಿಂಸೆ, ಅನಾಚಾರಗಳು ಹೆಚ್ಚುತ್ತಿವೆ. ಅಲ್ಲದೆ ಇಂದಿನ ಹೆಚ್ಚಿನ ಜನಪ್ರತಿನಿಧಿಗಳು ಗಾಂಧಿ ವಿಚಾರ ಧಾರೆಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.

ಮಹಾವೀರ ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಶೇಖರ ದೀಕ್ಷಿತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾತ್ಮಗಾಂಧಿ ಸಾಮಾನ್ಯ ಮನುಷ್ಯನಾಗಿದ್ದು ಅಸಾಮಾನ್ಯ ವ್ಯಕ್ತಿಯಾಗಿ ಬೆಳೆದು ನಿಂತವರು. ನಮ್ಮ ವ್ಯಕ್ತಿತ್ವವನ್ನು ಪುನರಾವಲೋಕನ ಮಾಡಿಕೊಳ್ಳಲು ಗಾಂಧಿ ವ್ಯಕ್ತಿತ್ವ ಪೂರಕವಾಗಿದೆ. ಗ್ರಾಮ ಸಬಲೀಕರಣ ಗಾಂಧೀಜಿಯವರ ಕನಸಾಗಿತ್ತು. ಆದರೆ ಇಂದು ನಗರ ಕೇಂದ್ರಿತವಾಗಿ ಅಭಿವೃದ್ಧಿಗಳು ನಡೆಯುತ್ತಿವೆ. ಪ್ರಸ್ತುತ ಕೇಂದ್ರ ಸರಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಸ್ಮಾರ್ಟ್ ಸಿಟಿ, ಸ್ಮಾರ್ಟ್ ವಿಲೇಜ್‌ಗೆ ಗಾಂಧೀಜಿ ಸ್ಫೂರ್ತಿಯಾಗಿದ್ದಾರೆ ಎಂದರು.

ಕಾರ್ಯಕ್ರಮ ಸಂಯೋಜಕ ಪ್ರೊ.ರಾಧಾಕೃಷ್ಣ ಶೆಟ್ಟಿ, ಮಹಾವೀರ ಶ್ರೀ ಮಹಾವೀರ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಭಟ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಹರೀಶ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಲಿಸ್ಟರ್, ಮಾನವಿಕ ಸಂಘದ ಅಧ್ಯಕ್ಷೆ ಸುರಕ್ಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕ ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಸುರಕ್ಷಾ ವಂದಿಸಿದರು. ರಂಜಿತಾ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಗಾಂಧೀಜಿ ಕುರಿತ ಪುಸ್ತಕಗಳ ಪ್ರದರ್ಶನವೂ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News