×
Ad

ಮುಸ್ಲಿಮರನ್ನು ದ್ವೇಷಿಸುವ ಆರೆಸ್ಸೆಸ್ ನ ಮೋದಿಯಿಂದ ಈಗ ಮೊಸಳೆ ಕಣ್ಣೀರು : ಪಿ.ವಿ. ಮೋಹನ್

Update: 2016-09-29 19:16 IST

ಮಂಗಳೂರು, ಸೆ.29: ಮುಸ್ಲಿಮರು ದ್ವೇಷದ ವಸ್ತುವಲ್ಲ, ಮತದ ಸರಕಲ್ಲ, ಅವರನ್ನು ಸಬಲೀಕರಣಗೊಳಿಸಬೇಕೆಂದು ಕರೆ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೇಳಿಕೆಯು ಮುಸ್ಲಿಂ ಸಮುದಾಯವನ್ನು ದಾರಿತಪ್ಪಿಸುವಂತಹದು. ಮುಂದಿನ ವರ್ಷ ಉತ್ತರಪ್ರದೇಶ ಮತ್ತು ಪಂಜಾಬ್‌ನಲ್ಲಿ ನಡೆಯುವ ವಿಧಾನ ಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಿದ ಮಾತಿನಲ್ಲಿ ರಾಜಕೀಯ ದುರುದ್ದೇಶವಿದೆ ಹೊರತು ಅದರಲ್ಲಿ ಪ್ರಾಮಾಣಿಕತೆ ಇಲ್ಲ. ಅದು ಮೋದಿಯವರ ಅಂತ:ಕರಣದಿಂದ ಬಂದ ಮಾತಲ್ಲ ಎಂದು ಎಐಸಿಸಿ ಸದಸ್ಯ ಪಿ.ವಿ. ಮೋಹನ್ ಹೇಳಿದ್ದಾರೆ.

ಮೊನ್ನೆ ಕೇರಳದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ದೀನದಯಾಳ್ ಉಪಾಧ್ಯಾಯರ ಮಾತುಗಳನ್ನು ಉಲ್ಲೇಖಿಸಿ ಮೋದಿಯವರು ಮುಸ್ಲಿಮರನ್ನು ನಮ್ಮವರಂತೆ ಕಾಣಿ ಎಂದು ಹೇಳಿದ್ದಾರೆ. ಆರೆಸ್ಸೆಸ್‌ನ ಸಂಸ್ಥಾಪಕರಲ್ಲಿ ಓರ್ವರಾದ ಗೋಳ್ವಾಲ್ಕರ್ ಮುಸ್ಲಿಮರನ್ನು ರಾಷ್ಟ್ರದ ಶತ್ರುವೆಂದು ಕಾಣಿರಿ ಎಂದು ಹೇಳಿದ್ದಾರೆ. ಪ್ರಧಾನ ಮಂತ್ರಿ ಮೋದಿಯವರು ಆರೆಸ್ಸೆಸ್‌ನಿಂದ ಬಂದವರು. ಮುಖ್ಯ ಪ್ರಚಾರಕರಾಗಿದ್ದವರು. ಅವರು ಅಲ್ಪಸಂಖ್ಯಾತರಿಗಾಗಿ ಸುರಿಸುತ್ತಿರುವುದು ಮೊಸಳೆ ಕಣ್ಣೀರು ಎಂಬುದು ದೇಶದ ಜನತೆಗೆ ಗೊತ್ತಿದೆ ಎಂದು ಪಿ.ವಿ.ಮೋಹನ್ ತಿಳಿಸಿದ್ದಾರೆ.

ದೇಶದ ಸೆಕ್ಯೂಲರ್ ಸಿದ್ಧಾಂತದ ಸಂಕೇತವಾಗಿದ್ದ ಬಾಬ್ರಿ ಮಸೀದಿಯನ್ನು ಕೆಡವಿದಾಗ ಮಾತನಾಡದ, ತನ್ನ ಮುಖ್ಯಮಂತ್ರಿ ಅವಧಿಯಲ್ಲಿ ಗುಜರಾತ್‌ನಲ್ಲಿ ನಡೆದ ನರಮೇಧದ ಬಗ್ಗೆ ಈಗಲೂ ವಿಷಾದ ವ್ಯಕ್ತಪಡಿಸದ ಮೋದಿಯವರ ಮಾತುಗಳು ನಯವಂಚನೆ ಹೊರತು ನಂಬಿಕೆಯನ್ನು ಹುಟ್ಟಿಸುವಂತಹದಲ್ಲ. ಮೋದಿಯವರು ಪೇಟಾ, ಟರ್ಬನ್, ಜಾಪಿ ಅಥವಾ ಅಸ್ಸಾಂನ ಟೋಪಿಯನ್ನು ಧರಿಸುತ್ತಾರೆ. ಆದರೆ ಇವತ್ತಿಗೂ ಮುಸ್ಲಿಮರ ಟೋಪಿಯನ್ನು ತಲೆಗೆ ಇಡಲು ನಿರಾಕರಿಸುತ್ತಾರೆ. ದಾದ್ರಿಯ ಮುಹಮ್ಮದ್ ಅಖ್ಲಾಕ್ ಕುಟುಂಬದವರನ್ನು ಕರೆದು ಇವತ್ತಿಗೂ ಸಾಂತ್ವನ ಹೇಳಿಲ್ಲ. ಮೋದಿಯವರು ಸೋನಿಯಾಗಾಂಧಿಯವರನ್ನು ನೋಡಿ ಕಲಿಯಬೇಕು. ಬಾಬ್ರಿ ಮಸೀದಿ ಕೆಡವಿದ ಘಟನೆ ವಿಷಾದ ವ್ಯಕ್ತಪಡಿಸಿದ್ದಾರೆ. ದಿಲ್ಲಿಯಲ್ಲಿ ನಡೆದ ಸಿಖ್ ಗಲಭೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇವತ್ತಿಗೂ ಅಲ್ಪಸಂಖ್ಯಾತರ, ದಲಿತರ ಪರವಾಗಿ ಧ್ವನಿ ಎತ್ತುವುದು ಕಾಂಗ್ರೆಸ್ ಪಕ್ಷ ಮಾತ್ರವಾಗಿದೆ ಎಂದು ಪಿ.ವಿ. ಮೋಹನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News