ರಸ್ತೆಯ ಹೊಂಡವನ್ನು ಮುಚ್ಚಲು ಬಿಎಎಸ್‌ಎಫ್ ಹೊರಟಿದ್ದು ಹೇಗೆ ಗೊತ್ತೇ?

Update: 2016-09-29 16:03 GMT

ಮಂಗಳೂರು, ಸೆ.29: ಘನವಾಹನಗಳ ಓಡಾಟದಿಂದ ಹದಗೆಟ್ಟು ಹೋಗಿರುವ ಸುರತ್ಕಲ್-ಎಂಆರ್‌ಪಿಎಲ್ ರಸ್ತೆಯಲ್ಲಿರುವ ಹೊಂಡವನ್ನು ಬಿಎಎಸ್‌ಎಫ್ ಕಂಪೆನಿಯ ಕೆಮಿಕಲ್ ತ್ಯಾಜ್ಯವನ್ನು ಹಾಕಿ ಮುಚ್ಚುವ ಯತ್ನ ನಡೆಯುತ್ತಿದ್ದ ಸಂದರ್ಭದಲ್ಲಿ ಡಿವೈಎಫ್‌ಐ ಕಾರ್ಯಕರ್ತರ ನೇತೃತ್ವದಲ್ಲಿ ಸಾರ್ವಜನಿಕರು ತಡೆಯೊಡ್ಡಿದ ಘಟನೆ ಇಂದು ನಡೆದಿದೆ.

ಬಿಎಎಸ್‌ಎಫ್ ಕಂಪೆನಿಯ ತ್ಯಾಜ್ಯವನ್ನು ಟಿಪ್ಪರ್‌ಗಳ ಮೂಲಕ ತಂದು ಹೊಂಡ ಮುಚ್ಚಲಾಗುತ್ತಿರುವುದನ್ನು ಗಮನಿಸಿದ ಡಿವೈಎಫ್‌ಐ ಕಾರ್ಯಕರ್ತರು ಮತ್ತು ಸಾರ್ವಜನಿಕರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಗುಂಡಿ ಮುಚ್ಚುವ ಕೆಲಸ ಅರ್ಧದಲ್ಲಿಯೇ ಸ್ಥಗಿತಗೊಂಡಿದೆ. ಸುರತ್ಕಲ್ ಎಂಆರ್‌ಪಿಎಲ್ ನಡುವಿನ ರಸ್ತೆಯು ಹದಗೆಟ್ಟಿರುವುದರಿಂದ ಇತ್ತೀಚೆಗೆ ಡಿವೈಎಫ್ ಕಾರ್ಯಕರ್ತರು ಮನಪಾ ಆಡಳಿತದ ಅಣಕು ಶವಯಾತ್ರೆಯನ್ನು ನಡೆಸಿದ್ದರು. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿವೈಎಫ್‌ಐ ರಾಜ್ಯಧ್ಯಕ್ಷ ಮುನೀರ್ ಕಾಟಿಪಳ್ಳ, ಇಲ್ಲಿನ ಬೃಹತ್ ಕೈಗಾರಿಕೆಗಳ ಘನವಾಹನಗಳ ಓಡಾಟದಿಂದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಇಲ್ಲಿರುವ ಕೈಗಾರಿಕಾ ಕಂಪೆನಿಗಳು, ಮನಪಾ, ಶಾಸಕರು ರಸ್ತೆ ದುರಸ್ತಿ ಮಾಡಬೇಕಾಗಿದೆ. ಆದರೆ ಮನಪಾದವರು ಬಿಎಎಸ್‌ಎಫ್ ಕಂಪೆನಿಯ ತ್ಯಾಜ್ಯವನ್ನು ತಂದು ಹೊಂಡವನ್ನು ಮುಚ್ಚಲು ಯತ್ನಿಸುತ್ತಿರುವುದು ನಾಚಿಕೆಗೇಡಿನ ವಿಷಯ. ಈ ರಸ್ತೆಯನ್ನು ಸಂಪೂರ್ಣ ದುರಸ್ಥಿ ಮಾಡಬೇಕು.ಕೇವಲ ಹೊಂಡವನ್ನು ಮುಚ್ಚುವುದನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News