ಪಾಕ್ ವಶದಲ್ಲಿ ಭಾರತೀಯ ಯೋಧ ?

Update: 2016-09-29 16:30 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಸೆ.29 : ಗಡಿ ನಿಯಂತ್ರಣ  ರೇಖೆಯಲ್ಲಿ ಭಾರತ ನಡೆಸಿದ ದಾಳಿಗೆ ತಾನು ಪ್ರತಿದಾಳಿ ನಡೆಸಿದ್ದು ಅದರಲ್ಲಿ  ಎಂಟು ಮಂದಿ ಭಾರತೀಯ ಯೋಧರು  ಹತರಾಗಿದ್ದು ಒಬ್ಬ ಭಾರತೀಯ ಯೋಧ ತನ್ನ ವಶದಲ್ಲಿದ್ದಾನೆ ಎಂದು ಪಾಕಿಸ್ತಾನದ ಮಿಲಿಟರಿಯನ್ನು ಉಲ್ಲೇಖಿಸಿ ಪಾಕ್ ಪತ್ರಿಕೆ ಡಾನ್ ವರದಿ ಮಾಡಿದೆ. 

ವಶದಲ್ಲಿರುವ ಯೋಧನನ್ನು ಚಂದು ಬಾಬುಲಾಲ್ ಚೌಹಾಣ್ ಎಂದು ಡಾನ್ ಹೇಳಿದ್ದು ಆತ ಮಹಾರಾಷ್ಟ್ರದವನು, ವಯಸ್ಸು 22  ಹಾಗು ಆತನ ತಂದೆಯ ಹೆಸರು ಭೂಷಣ್ ಚೌಹಾಣ್  ಎಂದೂ ಹೇಳಿದೆ. ಆತನನ್ನು ಈಗ ಅಜ್ಞಾತ ಸ್ಥಳದಲ್ಲಿ ಇರಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮೃತ ಭಾರತೀಯ ಯೋಧರ ಮೃತದೇಹಗಳನ್ನು ಭಾರತ ಇನ್ನೂ ತೆಗೆದುಕೊಂಡು ಹೋಗಿಲ್ಲ ಎಂದೂ ಆ ವರದಿಯಲ್ಲಿ ಹೇಳಲಾಗಿದೆ. 

"ಪಾಕಿಸ್ತಾನಿ ಹಾಗು ಭಾರತೀಯ ಸೇನೆಗಳ ನಡುವೆ ಗಡಿ ನಿಯಂತ್ರಣ ರೇಖೆಯ ಭೀಮಬರ್ , ಹಾಟ್ ಸ್ಪ್ರಿಂಗ್ , ಕೇಲ್ ಹಾಗು ಲಿಪ ಸೆಕ್ಟರ್ ಗಳಲ್ಲಿ  ರಾತ್ರಿ 2:30 ರಿಂದ ಬೆಳಗ್ಗೆ 8:00 ಗಂಟೆಯವರೆಗೆ ಗುಂಡಿನ ಚಕಮಕಿ ನಡೆದಿದೆ. ಭಾರತದ ಸೇನೆ ನಡೆಸಿದ ಗುಂಡು ಹಾರಾಟಕ್ಕೆ ಪಾಕ್ ಪಡೆಗಳು ಸೂಕ್ತ ಪ್ರತ್ಯುತ್ತರ ನೀಡಿವೆ " ಎಂದು  ಪಾಕಿಸ್ತಾನ ಸೇನೆಯನ್ನು ಉಲ್ಲೇಖಿಸಿ ಡಾನ್ ವರದಿ ಮಾಡಿದೆ. 

ಆದರೆ ಭಾರತೀಯ ಸೇನೆ ಇದನ್ನು ಖಚಿತಪಡಿಸಿಲ್ಲ. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News