ದರೋಡೆಗೆ ಸಂಚು: ಐವರ ಪೈಕಿ ಓರ್ವನ ಬಂಧನ
Update: 2016-09-29 21:57 IST
ಮಂಗಳೂರು,ಸೆ.29: ಸೆ.28 ರಂದು ಶ್ರೀಮಂತ ವ್ಯಕ್ತಿಗಳು ಸಿಕ್ಕಿದ್ದಲ್ಲಿ ದುಷ್ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ 5 ಜನರ ತಂಡವನ್ನು ಬೆನ್ನಟ್ಟಿದಾಗ ಓರ್ವ ಕಾವೂರು ಠಾಣಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಬಂಧಿತನನ್ನು ಕಾವೂರಿನ ಶಾಂತಿನಗರದ ದಿ.ಅಬ್ದುಲ್ ಖಾದರ್ ಎಂಬವರ ಪುತ್ರ ಅಶ್ರಫ್ (35) ಎಂದು ಗುರುತಿಸಲಾಗಿದೆ.
ಸಂಜೆ 4 ಗಂಟೆಗೆ ಸುಮಾರಿಗೆ ನಗರದ ಬೋಂದೆಲ್ ಕೆಎಚ್‌ಬಿ ಕಾಲನಿ ಬಳಿ ಇದ್ದ ಐದು ಮಂದಿಯನ್ನು ಬೆನ್ನಟ್ಟಿದಾಗ 4 ಜನರು ಓಡಿ ತಪ್ಪಿಸಿಕೊಂಡಿದ್ದರು. ತಪ್ಪಿಸಿಕೊಂಡವರನ್ನು ಉರುಂಡಾಡಿ ಗುಡ್ಡೆ ನಿವಾಸಿ ಸಮೀರ್ ಚಮ್ಮಿ, ಕೋಡಿಕೆರೆ ನಿವಾಸಿ ರಮ್ಝಾನ್, ಕರಂಬಾರು ನಿವಾಸಿ ನವಾಝ್, ಉರುಂಡಾಡಿ ಗುಡ್ಡೆ ಯ ಇಕ್ಬಾಲ್ ಎಂದು ಗುರುತಿಸಲಾಗಿದೆ.
ಬಂಧಿತನಿಂದ ಪ್ಯಾಂಟಿನ ಕಿಸೆಯಲ್ಲಿದ್ದ ಚೂರಿ ಹಾಗೂ ಕೈಗೆ ಹಾಕುವ ಪಂಚ್, ಮೊಬೈಲ್ ಸೆಟ್ ಒಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.