ಅತ್ಯಾಚಾರ ಪ್ರಕರಣದ ಆರೋಪಿ ಖುಲಾಸೆ

Update: 2016-09-29 16:31 GMT

ಮಂಗಳೂರು, ಸೆ.29: ದೂರದ ಸಂಬಂಧಿ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಕೈರಂಗಳ ಗ್ರಾಮದ ಮುಡಿಪುವಿನ ತನಿಯಪ್ಪ ಪುರುಷ (52)ನನ್ನು ಅತ್ಯಾಚಾರ ಆರೋಪದಿಂದ ಖುಲಾಸೆಗೊಳಿಸಿದೆ.

ಆದರೆ ವಂಚನೆಯ ಆರೋಪಕ್ಕಾಗಿ 2 ತಿಂಗಳ ಸಜೆ ಮತ್ತು 20,000 ರೂ.ದಂಡ ಹಾಗೂ ದಂಡ ತೆರಲು ತಪ್ಪಿದರೆ ಮತ್ತೆ 2 ತಿಂಗಳ ಸಜೆಯನ್ನು ಅನುಭವಿಸಬೇಕೆಂದು ತೀರ್ಪು ನೀಡಿದೆ.

2013ರಲ್ಲಿ 22 ವರ್ಷ ಪ್ರಾಯದ ಯುವತಿ ಪುತ್ತೂರಿನಲ್ಲಿರುವ ತನ್ನ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಆಕೆಯ ದೂರದ ಸಂಬಂಧಿ ಆರೋಪಿ ತನಿಯಪ್ಪ ಪುರುಷ ಅಲ್ಲಿಗೆ ತೆರಳಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಮಾಡಿದ್ದ. ದೈಹಿಕ ಸಂಪರ್ಕ ಬೆಳೆಸಿದ್ದ ಯುವತಿ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಆರೋಪಿಯು ನಂತರ ಮದುವೆಯಾಗಲು ನಿರಾಕರಿಸಿದಾಗ ಯುವತಿ ಆರೋಪಿ ತನಿಯಪ್ಪನ ವಿರುದ್ಧ ಅತ್ಯಾಚಾರ ಮತ್ತು ವಂಚನೆಯ ಕೇಸನ್ನು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಳು.

ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಮಂಗಳೂರಿನ 6 ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿ.ಟಿ.ಪುಟ್ಟರಂಗ ಸ್ವಾಮಿ, ಅತ್ಯಾಚಾರ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಈ ಆರೋಪದಿಂದ ದೋಷಮುಕ್ತಿಗೊಳಿಸಿದರು. ಆದರೆ ಮದುವೆಯಾಗಿ ನಂಬಿಸಿ ಮೋಸ ಮಾಡಿದ್ದರಿಂದ ವಂಚನೆಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2 ತಿಂಗಳ ಸಾದಾ ಸಜೆ ಮತ್ತು 20,000 ರೂ. ದಂಡ ವಿಧಿಸಿದರು. ದಂಡದ ಮೊತ್ತವನ್ನು ಯುವತಿಗೆ ನಷ್ಟ ಪರಿಹಾರವಾಗಿ ಪಾವತಿಸುವಂತೆ ಆದೇಶಿಸಿದರು. ಕಾನೂನು ಸೇವಾ ಪ್ರಾಧಿಕಾರದ ಮೂಲಕ ಸರಕಾರದಿಂದ ಪರಿಹಾರ ಪಡೆಯಲು ನಿರ್ದೇಶನ ನೀಡಿದರು. ಒಟ್ಟು 14 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ.ಎಂ. ಕ್ರಾಸ್ತಾ ಅವರು ವಾದಿಸಿದ್ದರು. ಆರೋಪಿ ಈಗಾಗಲೇ 51 ದಿನಗಳನ್ನು ನ್ಯಾಯಾಂಗ ಬಂಧನದಲ್ಲಿ ಕಳೆದಿದ್ದಾನೆ. ಈಗ ಆತನಿಗೆ ವಿಧಿಸಿರುವ ಜೈಲು ಶಿಕ್ಷೆ 60 ದಿನ. 60 ರಿಂದ 51 ದಿನಗಳನ್ನು ಕಳೆದರೆ ಆರೋಪಿ ಅನುಭವಿಸ ಬೇಕಾಗಿ ಬರುವ ಶಿಕ್ಷೆಯ ದಿನಗಳು ಕೇವಲ 9 ಮಾತ್ರ. ಒಂದೊಮ್ಮೆ 20,000 ರೂ. ದಂಡ ಪಾವತಿಸಲು ತಪ್ಪಿದರೆ ಮಾತ್ರ ಅದಕ್ಕಾಗಿ 2 ತಿಂಗಳ ಶಿಕ್ಷೆ ಅನುಭವಿಸ ಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News