×
Ad

ಗದ್ದಲಕ್ಕೆ ಕಾರಣವಾದ ‘ಕರ್ಮ’ ಪದ ಬಳಕೆ

Update: 2016-09-29 23:31 IST

ಉಡುಪಿ, ಸೆ.29: ಇಲ್ಲಿನ ನಗರಸಭಾ ವಿರೋಧ ಪಕ್ಷದ ನಾಯಕ ಡಾ.ಎಂ.ಆರ್.ಪೈ ಪೌರಾಯುಕ್ತರ ವಿರುದ್ಧ ಮಾಡಿರುವ ‘ಕರ್ಮ’ ಎಂಬ ಪದ ಬಳಕೆ ಗುರುವಾರ ನಡೆದ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು.
ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಇವರ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಡಾ.ಎಂ.ಆರ್.ಪೈ ಮಾತನಾಡಿ, 2014-15ನೆ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿ ಸಾಕಷ್ಟು ಲೋಪಗಳಿದ್ದು, ಈ ಗಂಭೀರ ಲೋಪಗಳನ್ನು ಆಧಾರಿಸಿ ನಗರಸಭೆಯನ್ನೇ ವಿಸರ್ಜನೆ ಮಾಡಬಹುದು. ಪೌರಾಯುಕ್ತರು ಹಾಗೂ ಅಧಿಕಾರಿಗಳು ಈ ವರದಿಯನ್ನು ಸದನದಲ್ಲಿ ಮಂಜೂರಾತಿ ಪಡೆದು ಸದಸ್ಯರ ತಲೆಗೆ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಪೌರಾಯುಕ್ತ ಡಿ. ಮಂಜುನಾಥಯ್ಯ, ವರದಿಯಲ್ಲಿ ಯಾವುದೇ ಲೋಪಗಳಾಗಿಲ್ಲ. ಇದು ಕಳೆದ ವರ್ಷದ ವರದಿಯಾಗಿದ್ದು, ಇದರಲ್ಲಿ ಉಲ್ಲೇಖಿಸಿರುವ ಬಾಕಿ ಹಣ ಎಲ್ಲವನ್ನು ಪಾವತಿಸಲಾಗಿದೆ. ಇದರಲ್ಲಿ ಲೋಪ ಬಂದರೂ ಅದಕ್ಕೆ ಅಧಿಕಾರಿಗಳೆ ಜವಾಬ್ದಾರರು ಹೊರತು ಸದಸ್ಯರಲ್ಲ ಎಂದರು. ಅಲ್ಲದೆ ಲೆಕ್ಕಪರಿಶೋಧನಾ ಅಧೀಕ್ಷಕಿ ಈ ಕುರಿತು ಸ್ಪಷ್ಟನೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಾ.ಎಂ.ಆರ್.ಪೈ, ಹಾಗಾದರೆ ಈ ವರದಿಯನ್ನು ‘ಕರ್ಮ’ಕ್ಕೆ ನಮಗೆ ಕೊಟ್ಟದ್ದು ಎಂದು ಪೌರಾಯುಕ್ತರನ್ನು ಉದ್ದೇಶಿಸಿ ಹೇಳಿದರು. ಇದಕ್ಕೆ ಅಸಮಾಧಾನಗೊಂಡ ಪೌರಾಯುಕ್ತರು ವಿಪಕ್ಷ ನಾಯಕರಿಗೆ ಖಾರವಾದ ಉತ್ತರ ನೀಡಿದರು.
ಇದರಿಂದ ಸಿಟ್ಟಿಗೆದ್ದ ವಿಪಕ್ಷ ಸದಸ್ಯರು, ಪೌರಾಯುಕ್ತರು ನಮಗೆ ನಿರ್ದೇಶನ ನೀಡುವ ಅಗತ್ಯವಿಲ್ಲ. ನಾವು ಜನರಿಂದ ಆಯ್ಕೆಯಾಗಿ ಬಂದವರು. ವರದಿಯಲ್ಲಿನ ಲೋಪ ಕೇಳಿದ್ದಕ್ಕೆ ಪೌರಾಯುಕ್ತರು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
‘ಲೋಪ ಹೇಳಿದ್ದಕ್ಕೆ ಯಾರು ಕೂಡ ತಪ್ಪು ಎಂದು ಹೇಳಿಲ್ಲ. ಆದರೆ ವಿಪಕ್ಷ ನಾಯಕರು ಕರ್ಮ ಎಂಬ ಪದ ಬಳಕೆ ಮಾಡಬಾರದಿತ್ತು.’ ಎಂದು ಯುವ ರಾಜ್ ಹೇಳಿದರು. ಇದೇ ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಮಧ್ಯೆ ವಾಗ್ವಾದ ನಡೆದು ಸಭೆ ಗದ್ದಲಮಯವಾಯಿತು. ಈ ಸಂದರ್ಭ ಅಧ್ಯಕ್ಷರು ಮಧ್ಯೆ ಪ್ರವೇಶಿಸಿ ಆ ಕುರಿತ ಚರ್ಚೆಗೆ ಅಂತ್ಯ ಹಾಡಿದರು.
ರಸ್ತೆ ದುರಸ್ತಿಗೆ ಒತ್ತಾಯ: ಮಳೆಗಾಲ ಮುಗಿಯುತ್ತ ಬಂದರೂ ಇನ್ನು ನಗರದಲ್ಲಿ ಹಾಳಾಗಿರುವ ರಸ್ತೆಗಳನ್ನು ದುರಸ್ತಿ ಮಾಡುವ ಕೆಲಸವಾಗಿಲ್ಲ ಎಂದು ದಿನಕರ ಶೆಟ್ಟಿ ಹೆರ್ಗ ಆರೋಪಿಸಿದರು. ಎಲ್ಲ ವಾರ್ಡ್‌ಗಳ ರಸ್ತೆಗಳು ಹಾಳಾಗಿದ್ದು, ಪ್ರತಿ ವಾರ್ಡ್ ಗಳಲ್ಲಿ ಕೂಡಲೇ ದುರಸ್ತಿ ಕಾಮಗಾರಿ ಆರಂಭಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಅಕ್ಟೋಬರ್ ತಿಂಗಳಲ್ಲಿ ದುರಸ್ತಿ ಬಗ್ಗೆ ಅಂದಾಜು ಪಟ್ಟಿ ತಯಾರಿಸಿ, ಸಂಪೂರ್ಣ ಮಳೆ ಬಿಟ್ಟ ನಂತರ ಅಂದರೆ ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಉತ್ತರಿಸಿದರು.
ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿ ಪಕ್ಕ ನಡೆಯುವ ಸಂತೆ ಮಾರುಕಟ್ಟೆಯನ್ನು ಬೇರೆಡೆ ವರ್ಗಾವಣೆ ಮಾಡುವ ಕುರಿತು ಸದಸ್ಯರು ಕೇಳಿದ ಪ್ರಶ್ನೆಗೆ ಈಗಾಗಲೇ ಕಂದಾಯ ಇಲಾಖೆಯವರು ಸ್ಥಳ ಪರಿಶೀಲನೆ ಮಾಡಿದ್ದು, ಸದ್ಯವೇ ಮಾರುಕಟ್ಟೆ ವರ್ಗಾಯಿಸುವ ಕಾರ್ಯ ನಡೆಯಲಿದೆ ಎಂದು ಪೌರಾಯುಕ್ತರು ತಿಳಿಸಿದರು.
ಬಜೆ ಡ್ಯಾಂನಲ್ಲಿ ಹೂಳು ತುಂಬಿದ್ದು, ಹೂಳು ತೆರವುಗೊಳಿಸುವ ಕಾರ್ಯ ಮಾಡಬೇಕಿದೆ. ಈ ಬಾರಿ ಮಳೆ ಪ್ರಮಾಣ ಕೂಡ ತೀರಾ ಕಡಿಮೆಯಾದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಜನಾರ್ದನ ಭಂಡಾರ್ಕರ್ ಹೇಳಿದರು. ಈ ಕುರಿತು ಲೋಕೋಪಯೋಗಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಒಳ ಹರಿವು ಕಡಿಮೆಯಾದ ಬಳಿಕ ಹೂಳು ತೆಗೆಯುವ ಕೆಲಸ ಮಾಡಲಾಗುವುದು ಎಂದು ಪೌರಾಯುಕ್ತರು ಉತ್ತರಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News