ನಾಳೆ ಧರ್ಮಸ್ಥಳದಲ್ಲಿ ಮದ್ಯವರ್ಜಿತರ ಸಮಾವೇಶ
ಬೆಳ್ತಂಗಡಿ, ಸೆ.29: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಮಗ್ರ ಶಿಬಿರ ವ್ಯವಸ್ಥಾಪನಾ ಸಮಿತಿಯ ಸಹಯೋಗದಲ್ಲಿ ಅ.1ರಂದು ಗಾಂಧಿ ಜಯಂತಿ ಪ್ರಯುಕ್ತ ನಡೆಯುತ್ತಿರುವ ಒಂದು ಸಾವಿರನೆ ಮದ್ಯವರ್ಜನ ಶಿಬಿರದ ಸಮಾರೋಪ ಹಾಗೂ ಸಾಹಸ್ರಾರು ಮದ್ಯವರ್ಜಿತರ ಸಮಾವೇಶವು ಶ್ರೀಕ್ಷೇತ್ರ ಧರ್ಮಸ್ಥಳದ ಅಮೃತ ವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಥಣಿ ಮೊಟಗಿಮಠದ ಶ್ರೀಪ್ರಭು ಚೆನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಸಮಾವೇಶವನ್ನು ಉದ್ಘಾಟಿಸಲಿದ್ದು, ಕೇಂದ್ರ ಆಯುಷ್ ಸಚಿವ ಶ್ರೀಪಾದ್ ಯೆಸ್ಕೋ ನಾಯ್ಕೋ ಜನಜಾಗೃತಿ ಲೋಗೊ ಬಿಡುಗಡೆ ಮಾಡುವರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸ್ಮರಣ ಸಂಚಿಕೆ, ಸಂಸದ ನಳಿನ್ ಕುಮಾರ್ ಕಟೀಲ್ ಪರಿವರ್ತನೆ ಸಿಡಿ ಮತ್ತು ಶಾಸಕ ಕೆ. ವಸಂತ ಬಂಗೇರ ಜನಜಾಗೃತಿ ವೇದಿಕೆಯ ಸಹಾಯವಾಣಿಯನ್ನು ಬಿಡುಗಡೆ ಮಾಡಲಿದ್ದಾರೆ. ವ್ಯಾಸಯೋಗ ವಿವಿಯ ಅಧ್ಯಕ್ಷ ಡಾ.ಎಚ್.ಆರ್.ನಾಗೇಂದ್ರ ನವಜೀವನ ಗುರುತುಚೀಟಿ ಬಿಡುಗಡೆ ಮಾಡಲಿರುವರು.
ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಜನಜಾಗೃತಿ ವೇದಿಕೆಯ ಮೂಲಕ 1998ರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಥಮ ಮದ್ಯವರ್ಜನ ಶಿಬಿರ ಆರಂಭಿಸಿ ಕಳೆದ 2 ದಶಕಗಳಿಂದ ರಾಜ್ಯಾವ್ಯಾಪಿ ಶಿಬಿರಗಳನ್ನು ನಡೆಸಲಾಗಿ1ೆ. ಈಗಾಗಲೇ ರಾಜ್ಯದಾದ್ಯಂತ 990 ಶಿಬಿರಗಳು ನಡೆದು ಸುಮಾರು 70 ಸಾವಿರ ಜನರಿಗೆ ವ್ಯಸನಮುಕ್ತರಾಗಲು ಚಿಕಿತ್ಸೆ ನೀಡಲಾಗಿದೆ. ಸುಮಾರು 8,000 ಮದ್ಯವರ್ಜಿತರು ಭಾಗವಹಿಸುತ್ತಿದ್ದು, ಪಾನಮುಕ್ತ ಸಮಾಜ ನಿರ್ಮಾಣದ ಸಂಕಲ್ಪವನ್ನು ಮಾಡಲಿದ್ದಾರೆ.