×
Ad

ಎತ್ತಿನಹೊಳೆ ಯೋಜನೆ ಸ್ಥಗಿತ

Update: 2016-09-29 23:35 IST

ಮಂಗಳೂರು, ಸೆ.29: ಎತ್ತಿನಹೊಳೆ ಯೋಜನೆ ಸ್ಥಗಿತಗೊಳಿಸಬೇಕಾದ ಅಗತ್ಯದ ಕುರಿತು ಪ್ರಧಾನಿ ಹಾಗೂ ಕೇಂದ್ರದ ಪರಿಸರ ಖಾತೆ ಸಚಿವರಿಗೆ ಮನವರಿಕೆ ಮಾಡಿಕೊಡುವುದಾಗಿ ರಾಷ್ಟ್ರೀಯ ಗಂಗಾನದಿ ಜಲಾನಯನ ಪ್ರಾಧಿಕಾರದ ಉಪಾಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಶ್ರೀ ಆನಂದ ಸ್ವರೂಪ ಸ್ವಾಮೀಜಿ ಭರವಸೆ ನೀಡಿದ್ದಾರೆ.
ಎತ್ತಿನಹೊಳೆ ಯೋಜನೆ ವಿರುದ್ಧ ಹೋರಾಟ ಚುರುಕುಗೊಳಿಸುವ ಉದ್ದೇಶದಿಂದ ನಗರದಲ್ಲಿ ಗುರುವಾರ ಏರ್ಪಡಿಸಿದ ಸಭೆಯಲ್ಲಿ ಅವರು ಮಾರ್ಗದರ್ಶನ ನೀಡಿದರು.
ಉಭಯ ನಾಯಕರ ಜೊತೆ ಈ ಕುರಿತು ಶೀಘ್ರದಲ್ಲೇ ಸಮಾಲೋಚನೆ ಜತೆಗೆ ಲಿಖಿತ ಮಾಹಿತಿ ಒದಗಿಸಲಾಗುವುದು. ಪರಿಸರ ಪರ ಹೋರಾಟದಿಂದಲೇ ಇಂದಿನ ಸ್ಥಾನ ತಲುಪಿರುವ ಪರಿಸರ ಸಚಿವರಿಂದ ಸಕಾರಾತ್ಮಕ ಸ್ಪಂದನೆ ದೊರೆಯುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸದ ನಳಿನ್‌ಕುಮಾರ್ ಕಟೀಲ್, ಸ್ವಾತಂತ್ರ ಸಂಗ್ರಾಮ ರೀತಿಯಲ್ಲಿ ಪ್ರತೀ ಹಳ್ಳಿಯ ಜನರನ್ನು ಎಬ್ಬಿಸಬೇಕು. ತಿಂಗಳೊಳಗೆ ಈ ಬಗ್ಗೆ ರಥಯಾತ್ರೆ ಕೈಗೊಳ್ಳಬಹುದು. ಎತ್ತಿನಹೊಳೆ ಯೋಜನೆ ವಿರುದ್ಧ ಹೋರಾಟ ತೀವ್ರಗೊಳಿಸುವ ಉದ್ದೇಶದಿಂದ ಸಭೆ ಕರೆಯಲಾಗಿದ್ದು, ಗಂಗಾಜಲ ಸಂರಕ್ಷಣಾ ಕಾರ್ಯದಲ್ಲಿ ಪ್ರಧಾನಿ ಜತೆ ಕೈಜೋಡಿಸಿರುವ ಸ್ವಾಮೀಜಿ ಅವರು ನಮ್ಮ ಹೋರಾಟಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.
ರಾಜ್ಯ ಸರಕಾರ ತಕ್ಷಣ ಯೋಜನೆಯ ಕಾಮಗಾರಿ ನಿಲ್ಲಿಸಿ ಜಿಲ್ಲೆಯ ಜನರ ಜತೆ ಸಂವಾದ ನಡೆಸಬೇಕು ಎಂದು ಆಗ್ರಹಿಸಿದರು.
ಕಾನೂನು, ತಾಂತ್ರಿಕ ಮಟ್ಟ ಹಾಗೂ ಜನಜಾಗೃತಿ ಹೀಗೆ ಮೂರು ಹಂತಗಳಲ್ಲಿ ಹೋರಾಟ ಮುಂದುವರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಶಾಸಕ ವಿಜಯ ಕುಮಾರ್‌ಶೆಟ್ಟಿ ಮಾತನಾಡಿದರು. ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟ ಸಮಿತಿ ಸಂಚಾಲಕ ಡಾ.ನಿರಂಜನ ರೈ, ಜಲತಜ್ಞ ಎಸ್.ಜಿ.ಮಯ್ಯ, ಅನ್ವರ್ ಮಾಣಿಪ್ಪಾಡಿ, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಮುಖಂಡರಾದ ಎಂ.ಜಿ. ಹೆಗಡೆ, ಡಾ. ಅಣ್ಣಯ್ಯ ಕುಲಾಲ್ ಉಪಸ್ಥಿತರಿದ್ದರು.
ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಕಾನೂನು ಸಲಹೆಗಾರ ದಿನಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News