ಶಾಲಾ ಕಾಲೇಜುಗಳಲ್ಲಿ ಜಾಗೃತಿ ಅಗತ್ಯ : ಡಾ.ಶಶಿಕಲಾ

Update: 2016-09-29 18:09 GMT

ಮೂಡುಬಿದಿರೆ, ಸೆ.29: ಹೆಣ್ಣು ಶಿಶುಗಳನ್ನು ಉಳಿಸುವ ಹಾಗೂ ಮಾನ ಕಾಪಾಡುವ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಅಗತ್ಯ. ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಹೆಣ್ಣುಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಿದೆ. ತಂತ್ರಜ್ಞಾನದ ಬಳಕೆ ಸದುದ್ದೇಶಕ್ಕೆ ಇರಬೇಕೇ ಹೊರತು ಹೆಣ್ಣು ್ರೂಣ ಪತ್ತೆ, ಹತ್ಯೆಯಂತ ಕೃತ್ಯಗಳಿಗೆ ಸಾಧನವಾಗಬಾರದು ಎಂದು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಲಾ ಅಭಿಪ್ರಾಯಪಟ್ಟರು.

ಅವರು ಅಂತಾರಾಷ್ಟ್ರೀಯ ಹೆಣ್ಣು ಶಿಶು ದಿನಾಚರಣೆ ಅಂಗವಾಗಿ ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಗುರುವಾರ ನಡೆದ ಹೆಣ್ಣು ಶಿಶು ಉಳಿಸಿ ಅಭಿಯಾನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರಕಾರ ಮಹಿಳಾ ಸಬಲೀಕರಣಕ್ಕೆ ವಿವಿಧ ಯೋಜನೆಯಳನ್ನು ಜಾರಿಗೊಳಿಸಿ ಸಮಾಜದಲ್ಲಿ ಮಹಿಳೆಯ ಸ್ಥಾನಮಾನವನ್ನು ಉತ್ತಮಗೊಳಿಸಲು ಪ್ರೇರಣೆ ನೀಡುತ್ತಾ ಬರುತ್ತಿದೆ. ಹೆಣ್ಣಿನ ಶೋಷಣೆಗೆ ಕಾರಣವಾಗುವ ಆಚರಣೆಗಳ ನಿಷೇಧ, ಇತ್ತೀಚೆಗೆ ಹೆಣ್ಣಿನ ಮೇಲೆ ಹೆಚ್ಚಾಗುತ್ತಿರುವ ದೌರ್ಜನ್ಯವನ್ನು ನಿಲ್ಲಿಸಲು, ಅದಕ್ಕಿರುವ ಕಠಿಣ ಕಾನೂನಿನ ಸರಿಯಾದ ಅನುಷ್ಠಾನವಾಗಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಚಿಂತಕಿ ವಾಣಿ ಪೆರಿಯೋಡಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದರು. ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಉಷಾರಾಣಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕಿ ಶೆರ್ಲಿ ಟಿ.ಬಾಬು ಸ್ವಾಗತಿಸಿದರು. ಸಾಕ್ಷಿ ಹಾಗೂ ಸಕೇಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News