×
Ad

ನಿವೇಶನ ರಹಿತರಿಂದ ಹಕ್ಕುಪತ್ರಕ್ಕಾಗಿ ಧರಣಿ

Update: 2016-09-29 23:59 IST

ಕುಂದಾಪುರ, ಸೆ.29: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ಮನೆ ನಿವೇಶನ ರಹಿತರಿಗೆ ಭೂಮಿ ಹಕ್ಕುಪತ್ರ ಮಂಜೂರು ಹಾಗೂ ಸರಕಾರಿ ಭೂಮಿಯನ್ನು ವಿತರಣೆ ಮಾಡುವಂತೆ ಆಗ್ರಹಿಸಿ ನಿವೇಶನ ರಹಿತ ಅರ್ಜಿದಾರರು ಕುಂದಾಪುರ ಮಿನಿ ವಿಧಾನ ಸೌಧ ಎದುರು ಸೆ.28ರಂದು ಧರಣಿ ನಡೆಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಮಂಡ್ಯ ಜಿಲ್ಲಾಧ್ಯಕ್ಷ ಪುಟ್ಟ ಮಾದು, ಹಕ್ಕು ಪತ್ರ ಮಂಜೂರು ಮಾಡಲು ಅರ್ಜಿ ಸಲ್ಲಿಸಿ ಆಗ್ರಹಿಸಿದಾಗ ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ ನಿವೇಶನ ರಹಿತರ ಅಂತಿಮ ಪಟ್ಟಿ ಸಿದ್ಧಪಡಿಸಿ ವರ್ಷ ಕಳೆದರೂ ಈವರೆಗೆ ಹಕ್ಕುಪತ್ರ ಮಂಜೂರು ಮಾಡುವುದಕ್ಕೆ ಸರಕಾರಿ ಜಾಗ ಗುರುತಿಸಲಾಗಿದ್ದರೂ ನಿವೇಶನ ರಹಿತರಿಗೆ ವಿತರಣೆ ಮಾಡದೆ ದ್ರೋಹ ಮಾಡಲಾಗಿದೆ ಎಂದು ದೂರಿದರು.
 
ಧರಣಿನಿರತರಿಂದ ಮನವಿ ಸ್ವೀಕರಿಸಿದ ಕುಂದಾಪುರ ತಹಶೀಲ್ದಾರ್ ಬೊರ್ಕರ್ ಮಾತನಾಡಿ, ಈ ಸಂಬಂಧ ಮುಂದಿನ ತಿಂಗಳು ಜಂಟಿ ಸಭೆಯನ್ನು ನಡೆಸಲು ತೀರ್ಮಾನಿಸಲಾಗಿದೆ. ಮುಂದಿನ 3ತಿಂಗಳೊಳಗಾಗಿ ಪ್ರಥಮ ಹಂತ ಮನೆ ನಿವೇಶನ ಹಂಚಿಕೆಯ ಪ್ರಕ್ರಿಯೆಯನ್ನು ಆರಂಭಿಸ ಲಾಗುವುದು. ಅತಿಕ್ರಮಣ ಮಾಡಿರುವ ಸರಕಾರಿ ಜಾಗವನ್ನು ತೆರವುಗೊಳಿಸುವುದಕ್ಕಾಗಿ ಸಿದ್ಧಪಡಿಸಿದ ಕ್ರಿಯಾ ಯೋಜನಾ ಪಟ್ಟಿಯಂತೆ ಸ್ಥಳ ಸ್ವಾಧೀನಪಡಿಸಿ ನಿವೇಶನ ರಹಿತರಿಗೆ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಧರಣಿಯಲ್ಲಿ ವೆಂಕಟೇಶ್ ಕೋಣಿ, ರಾಜೀವ ಪಡುಕೋಣೆ, ನಾಗರತ್ನಾ ನಾಡ, ಕೆ.ಶಂಕರ, ಮಹಾಬಲ ವಡೇರಹೋಬಳಿ, ಸುಬ್ರಹ್ಮಣ್ಯ ಆಚಾರ್, ಶೀಲಾವತಿ, ರಮೇಶ ಪೂಜಾರಿ, ಬಾಲಕೃಷ್ಣ ಕೆ.ಎಂ., ಗೋಪಾಲ ಶೆಟ್ಟಿಗಾರ್, ಪದ್ಮಾವತಿ ಶೆಟ್ಟಿ, ಕುಶಲ ಕರಿಯ ದೇವಾಡಿಗ, ಶಂಕರ ಆನಗಳ್ಳಿ, ರಮಾನಾಥ ಭಂಡಾರಿ, ಮನ್ಸೂರ್ ಇಬ್ರಾಹೀಂ ಮರವಂತೆ, ಯಶೋಧ ಹೊಯ್ಯಾಣ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News