×
Ad

ದ್ವಿತೀಯ ಟೆಸ್ಟ್ ಕ್ರಿಕೆಟ್: ಗಂಭೀರ್‌ರನ್ನು ಹಿಂದಿಕ್ಕಿ ಸ್ಥಾನ ಗಿಟ್ಟಿಸಿದ ಧವನ್ ಗಳಿಸಿದ ರನ್ನೆಷ್ಟು ಗೊತ್ತೆ?

Update: 2016-09-30 09:52 IST

ಕೋಲ್ಕತ್ತ, ಸೆ.30: ನ್ಯೂಝಿಲೇಂಡ್ ವಿರುದ್ಧ ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಆರಂಭದಲ್ಲೇ ಆಘಾತ ಅನುಭವಿಸಿದೆ. ಗೌತಮ್ ಗಂಭೀರ್‌ರನ್ನು ಹಿಂದಿಕ್ಕಿ ಮತ್ತೊಮ್ಮೆ ತಂಡದಲ್ಲಿ ಅವಕಾಶ ಗಿಟ್ಟಿಸಿದ ಶಿಖರ್ ಧವನ್ ಕೇವಲ ಒಂದು ರನ್‌ಗೆ ಔಟಾಗಿ ನಿರಾಸೆ ಮೂಡಿಸಿದ್ದಾರೆ.
ಆಡುವ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಅನುಭವಿ ಆಟಗಾರ ಗೌತಮ್ ಗಂಭೀರ್‌ ಮತ್ತೊಮ್ಮೆ ವಿಫಲರಾಗಿದ್ದಾರೆ. ಆದರೆ ಅವರ ಬದಲಿಗೆ ಮುರಳಿ ವಿಜಯ್‌ರೊಂದಿಗೆ ಆರಂಭಿಕರಾಗಿ ಕಣಕ್ಕಿಳಿದ ಧವನ್ 10 ಎಸೆತಗಳನ್ನು ಎದುರಿಸಿ ಕೇವಲ ಒಂದು ರನ್ ಗಳಿಸಲಷ್ಟೇ ಶಕ್ತರಾಗಿ ಮ್ಯಾಟ್ ಹೆನ್ರಿಗೆ ವಿಕೆಟ್ ಒಪ್ಪಿಸಿದರು.
ಗೌತಮ್ ಗಂಭೀರ್‌ ಸುದೀರ್ಘ ವನವಾಸದ ಬಳಿಕ ಅತ್ಯುತ್ತಮ ಪ್ರದರ್ಶನಗಳ ಮೂಲಕ ಆಯ್ಕೆ ಸಮಿತಿಯ ಗಮನ ಸೆಳೆದು ತಂಡಕ್ಕೆ ಆಯ್ಕೆಗೊಂಡಿದ್ದರು. ಆದರೆ ಆಡುವ ಅಂತಿಮ ಹನ್ನೊಂದು ಮಂದಿಯಲ್ಲಿ ಅವರನ್ನು ಸೇರಿಸಿಕೊಳ್ಳಲು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮನ ಮಾಡದಿರುವುದರಿಂದ  ಗಂಭೀರ್‌ ಮತ್ತೊಮ್ಮೆ ಅವಕಾಶ ವಂಚಿತರಾಗಿದ್ದಾರೆ. ಓಪನರ್ ಆಗಿ ರನ್ ಬರ ಎದುರಿಸುತ್ತಿರುವ ಶಿಖರ್ ಧವನ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಗಾಯದ ಸಮಸ್ಯೆಯ ಹಿನ್ನೆಲೆಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದ ಕೆ.ಎಲ್.ರಾಹುಲ್ ಪಂದ್ಯದಿಂದ ಹೊರಗುಳಿದ ಕಾರಣ ಗಂಭೀರ್‌ ಟೀಮ್ ಇಂಡಿಯಾಕ್ಕೆ ವಾಪಸ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News