ತನ್ನನ್ನು ತಾನೇ ಹಿಟ್ಲರ್ ಎಂದ ರಾಷ್ಟ್ರಾಧ್ಯಕ್ಷ !
ಮನಿಲಾ,ಸೆ.30 :ಫಿಲಿಫೀನ್ಸ್ ಅಧ್ಯಕ್ಷ ರೊಡ್ರಿಗೋ ಡ್ಯುಟೆರ್ಟೊ ತಮ್ಮನ್ನು ಹಿಟ್ಲರ್ ಗೆ ಹೋಲಿಸಿಕೊಂಡಿದ್ದು, ಜರ್ಮನಿಯಲ್ಲಿ ನಾಝಿಗಳು ಮೂರು ಮಿಲಿಯನ್ ಯಹೂದ್ಯರನ್ನು ಕೊಂದಂತೆ ತಾನು ಕೂಡ ಮಿಲಿಯಗಟ್ಟಲೆ ಡ್ರಗ್ಸ್ ವ್ಯಸನಿಗಳನ್ನು ‘ಕೊಲ್ಲಲು ಸಂತಸ’ ಪಡುವುದಾಗಿಹೇಳಿಕೊಂಡಿದ್ದಾರೆ.
ವಿಯೆಟ್ನಾಂ ಭೇಟಿಯ ನಂತರ ದಾವಾವೋ ನಗರಕ್ಕೆ ಶುಕ್ರವಾರ ಆಗಮಿಸಿದ ರೊಡ್ರಿಗೋ ಮೇಲಿನಂತೆ ಹೇಳಿದ್ದಾರೆ.
‘‘ಜರ್ಮನಿಗೆ ಹಿಟ್ಲರ್ ಇದ್ದರೆ, ಫಿಲಿಪ್ಪೀನ್ಸ್ ಬಳಿ ....’’ ಎಂದು ಹೇಳಿ ಅರ್ಧಕ್ಕೆ ನಿಲ್ಲಿಸಿ ಫಿಲಿಪ್ಪೀನ್ಸ್ ನ ಹಿಟ್ಲರ್ ಆಗಿ ತಾನಾಗಿದ್ದೇನೆ ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ.
ಹಿಟ್ಲರ್ ನ ಸಂತ್ರಸ್ತರೆಲ್ಲಾ ಮುಗ್ಧರಾಗಿದ್ದರೆ, ತನ್ನ ಗುರಿ ‘ಕ್ರಿಮಿನಲ್’ ಗಳು ಎಂದು ರೊಡ್ರಿಗೋ ಹೇಳಿಕೊಂಡಿದ್ದಾರೆ. ಅವರನ್ನೆಲ್ಲಾ ಮುಗಿಸಿ ಬಿಟ್ಟರೆ ದೇಶದಲ್ಲಿ ಮಾದಕ ವಸ್ತುಗಳ ಜಾಲ ಅಂತ್ಯವಾಗುವುದು ಎಂದು ಹೇಳಿದ್ದಾರೆ.
ಈ ವರ್ಷದ ಮೇ ತಿಂಗಳಲ್ಲಿ ರಾಷ್ಟ್ರಾಧ್ಯಕ್ಷರಾಗಿ ಚುನಾಯಿತರಾದ ರೊಡ್ರಿಗೋ ತಾವು ದೇಶದ ಡ್ರಗ್ಸ್ ಸಮಸ್ಯೆಯ ವಿರುದ್ಧ ಹೋರಾಡುವುದಾಗಿ ಘೋಷಿಸಿದ್ದರು. ಅವರು ಜೂನ್ 30 ರಂದು ಅಧಿಕಾರ ವಹಿಸಿದಾಗಿನಿಂದ ದೇಶದಲ್ಲಿ 3,500 ಕ್ಕೂ ಹೆಚ್ಚು ಜನರು ಪೊಲೀಸ್ ಕಾರ್ಯಾಚರಣೆಯಲ್ಲಿ ಹಾಗೂ ಅಪರಿಚಿತ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದಾರೆ.