ಚೀನಾ ಇಡೀ ವಿಶ್ವದಿಂದ ಕತ್ತೆಗಳನ್ನು ಖರೀದಿಸುತ್ತಿದೆ. ಏಕೆ ಗೊತ್ತೇ ?

Update: 2016-09-30 09:43 GMT

ಬೀಜಿಂಗ್,ಸೆ.30 :ಚೀನಾ ವಿಶ್ವದ ಹಲವಾರು ದೇಶಗಳಿಂದ ಸಾವಿರಾರು ಕತ್ತೆಗಳನ್ನು ಖರೀದಿಸುತ್ತಿದೆ. ಏಕಂತೀರಾ ? ಕತ್ತೆಗಳ ಚರ್ಮದಿಂದ ಉತ್ಪಾದಿಸಲಾಗುವ ಜಿಲೆಟಿನ್ ಚೀನಾದ ಅತ್ಯಂತ ಜನಪ್ರಿಯ ಸಾಂಪ್ರದಾಯಿಕ ಔಷಧಿಯಾದ ಇಜಿಯಾವೋ ತಯಾರಿಸಲು ಅತ್ಯಗತ್ಯವಾಗಿದ್ದು ಈ ಔಷಧಿ ನೆಗಡಿಯಿಂದ ಹಿಡಿದು ನಿದ್ರಾಹೀನತೆಗೆ ಪರಿಣಾಮಕಾರಿಯೆನ್ನಲಾಗುತ್ತಿದೆ.

ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಕೃಷಿಗೆ ಜನರು ಬೆನ್ನು ತಿರುಗಿಸಿರುವ ಪರಿಣಾಮ ಕತ್ತೆಗಳ ಸಂತತಿ ಕಡಿಮೆಯಾಗುತ್ತಿದ್ದು ಕಳೆದ 20 ವರ್ಷಗಳಲ್ಲಿ ದೇಶದಲ್ಲಿನ ಕತ್ತೆಗಳ ಜನಸಂಖ್ಯೆ 11 ಮಿಲಿಯನ್ ನಿಂದ ಆರು ಮಿಲಿಯನ್ ಗೆ ಇಳಿದಿದೆ.

ಇದೀಗ ಚೀನಾ ಕತ್ತೆಗಳನ್ನು ಆಫ್ರಿಕಾದಿಂದ ಆಮದು ಮಾಡಿಕೊಳ್ಳುತ್ತಿದ್ದು ಇತರ ಹಲವಾರು ದೇಶಗಳಿಂದಲೂ ಕತ್ತೆಗಳನ್ನು ತರಿಸುತ್ತಿದೆ. ಆದರೂ ಈ ಪ್ರಕ್ರಿಯೆಗೆ ಈಗ ಹಲವಾರು ತಡೆಗಳೆದುರಾಗಿವೆ ಎಂದು ಹೇಳಲಾಗುತ್ತಿದೆ.

ಆಫ್ರಿಕಾದ ನೈಗರ್ ರಾಜ್ಯವು ಇಲ್ಲಿಯ ತನಕ ಚೀನಾಗೆ 80,000 ಕತ್ತೆಗಳನ್ನುರಫ್ತು ಮಾಡಿದ್ದು ಇದರಿಂದ ತನ್ನ ದೇಶದ ಕತ್ತೆಗಳ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದೆಯೆಂದು ಅರಿತುಕೊಂಡು ಅವುಗಳ ರಫ್ತಿಗೆ ನಿಷೇಧ ಹೇರಿದೆ. ಇದಕ್ಕೂ ಮುಂಚೆ ಆಗಸ್ಟ್ ತಿಂಗಳಲ್ಲಿ ಬುರ್ಕಿನಾ ಫಾಸೊ ಕೂಡ ಇಂತಹುದೇ ಕ್ರಮ ಕೈಗೊಂಡಿದ್ದು ಅದು ಇಲ್ಲಿಯ ತನಕ 45,000 ಕತ್ತೆಗಳನ್ನು ಚೀನಾ ದೇಶಕ್ಕೆ ರಫ್ತು ಮಾಡಿದೆ.

ಆದರೆ ಕತ್ತೆಗಳ ಚರ್ಮವನ್ನು ಚೀನಾಗೆ ರಫ್ತು ಮಾಡುವ ದೇಶಗಳಲ್ಲಿ ಕಸಾಯಿಖಾನೆಗಳಿಂದುಂಟಾದ ಪರಿಸರ ಹಾಗೂ ಆರೋಗ್ಯ ಸಮಸ್ಯೆಗಳು ಹೇಳತೀರದಾಗಿರುವುದರಿಂದ ಕೆಲವು ದೇಶಗಳು ಈಗ ಕತ್ತೆ ಚರ್ಮದ ರಫ್ತಿಗೆ ನಿಷೇಧ ಹೇರಲು ಕಾರಣವಾಗಿದೆ. ಆದರೆ ಇದರಿಂದ ಕತ್ತೆ ಚರ್ಮ ರಫ್ತಿಗೆ ಇನ್ನಿತರ ದೇಶಗಳು ಪೈಪೋಟಿಯೊಡ್ಡುವ ಸಂಭವವಿದೆ.

ಅತ್ತ ಚೀನಾದಲ್ಲಿ ಇಜಿಯಾವೋ  ಔಷಧಿಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಇದ್ದು ಇದಕ್ಕಾಗಿ ಕತ್ತೆಗಳ ರಫ್ತು ವರದಾನವಾಗುವ ಬದಲು ಶಾಪವಾಗದಂತೆ ನೋಡಿಕೊಳ್ಳುವ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News