ಇವರ ಪಾಲಿಗೆ ವ್ಯಾಪಾರಕ್ಕಿಂತ ಹೈನುಗಾರಿಕೆಯಲ್ಲೇ ಲಾಭ ಅಧಿಕ!

Update: 2016-09-30 11:26 GMT

ಮೂಡುಬಿದಿರೆ, ಸೆ.30: ವ್ಯಾಪಾರಕ್ಕಿಂತ ಹೈನುಗಾರಿಕೆಯಲ್ಲೇ ಹೆಚ್ಚು ಸಂಪಾದನೆ ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ ವ್ಯಾಪಾರಿಯೊಬ್ಬರ ಸಾಹಸ ಕಥನ ಇಲ್ಲಿದೆ ನೋಡಿ....

ಈ ಹೈನುಗಾರನ ಹೆಸರು ಭಾಸ್ಕರ್ ಶೆಟ್ಟಿ. ಇವರು ಮಂಗಳೂರು ತಾಲೂಕಿನ ಮೂಡುಬಿದಿರೆ ಪುರಸಬಾ ವ್ಯಾಪ್ತಿಯ ಕರಿಂಜೆ ಗ್ರಾಮದ ಗಾಂದೊಟ್ಟು. ಸಣ್ಣ ವಯಸ್ಸಿನಲ್ಲಿಯೇ ಉದ್ಯೋಗವನ್ನರಸಿ ಮುಂಬೈಯತ್ತ ಹೆಜ್ಜೆ ಹಾಕಿದ್ದ ಇವರು ಕಳೆದ 30 ವರ್ಷಗಳಿಂದ ವ್ಯಾಪಾರ ಸಹಿತ ಇತರ ವಹಿವಾಟು ಮಾಡಿಕೊಂಡು ಅಲ್ಲೇ ಇದ್ದರು. ಆದರೆ ಕಳೆದ ಮೂರು ವರ್ಷಗಳ ಹಿಂದೆ ಮತ್ತೆ ಊರಿಗೆ ಹಿಂದಿರುಗಿ ಇಲ್ಲೇ ಉಳಿದುಕೊಂಡು ಹೈನುಗಾರಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡರು.

‘‘ಹೈನುಗಾರಿಕೆಯಲ್ಲಿ ಲಾಭವಿದೆ, ಸಂತಸವಿದೆ. ಅಂಗಡಿಯೊಂದರಲ್ಲಿ ವ್ಯಾಪಾರ ಮಾಡಿ ಗಳಿಸುತ್ತಿದ್ದಕ್ಕಿಂತ ಐದು ಪಟ್ಟು ಹೆಚ್ಚು ತಾನು ಹೈನುಗಾರಿಕೆಯಲ್ಲಿ ಸಂಪಾದಿಸುತ್ತಿದ್ದೇನೆ’’ ಎಂದು ಹೇಳುತ್ತಾರೆ ಭಾಸ್ಕರ್ ಶೆಟ್ಟಿ.

ಇದೀಗ 20 ಜರ್ಸಿ ದನಗಳನ್ನು ಸಾಕುತ್ತಿರುವ ಭಾಸ್ಕರ್ ಶೆಟ್ಟಿ, ದಿನಕ್ಕೆ 180 ಲೀಟರ್ ಹಾಲನ್ನು ಡೇರಿಗೆ ಹಾಕುತ್ತಿದ್ದು ತಿಂಗಳ ಆದಾಯ 50,000 ರೂ. ಆದಾಯ ಗಳಿಸುತ್ತಿದ್ದಾರೆ. ಎರಡೂವರೆ ಎಕರೆಯಷ್ಟು ಜಮೀನನ್ನು ಹೊಂದಿರುವ ಇವರು ಒಂದು ಎಕರೆ ಪ್ರದೇಶದಲ್ಲಿ ಹುಲ್ಲನ್ನು ಬೆಳೆಸಿದ್ದಾರೆ. ಇದರ ಜೊತೆಗೆ ಒಂದು ಎಕರೆ ಜಾಗದಲ್ಲಿ ಅಡಿಕೆ ಗಿಡಗಳನ್ನು ನೆಟ್ಟಿದ್ದಾರೆ. ಆರಂಭಿಕ ಹಂತದಲ್ಲಿ ಸ್ವಂತ ದುಡಿಯುತ್ತಿದ್ದ ಭಾಸ್ಕರ್ ಶೆಟ್ಟಿ, ಇದೀಗ ಮೂವರು ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿದ್ದಾರೆ. ಬೆಳಗ್ಗೆ 6 ಗಂಟೆಗೆ ಮತ್ತು ಸಂಜೆ 4 ಗಂಟೆಗೆ ಯಂತ್ರದ ಮೂಲಕ ಹಾಲು ಕರೆಯುತ್ತಾರೆ.

ದನಗಳ ಕೊಟ್ಟಿಗೆಯನ್ನು ಉತ್ತಮ ಗಾಳಿ ಮತ್ತು ಬೆಳಕು ಬೀಳುವಂತೆ ಉತ್ತಮ ರೀತಿಯಲ್ಲಿ ನಿರ್ಮಿಸಲಾಗಿದ್ದು, ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ. ಸೆಗಣಿ ಮತ್ತು ನೀರನ್ನು ಹೊರಗೆ ಹೊಂಡದಲ್ಲಿ ಶೇಖರಿಸಿ ಅದರಿಂದ ಗೋಬರ್ ಗ್ಯಾಸನ್ನು ಉತ್ಪಾದಿಸಲಾಗುತ್ತದೆ. ಗೊಬ್ಬರವನ್ನು ಕೃಷಿಗಳಿಗೆ ಮತ್ತು ಅಡಿಕೆ ತೋಟಕ್ಕೆ ಬಳಸುವ ಮೂಲಕ ಸಾವಯವ ಕೃಷಿಗೆ ಒತ್ತು ನೀಡುತ್ತಿದ್ದಾರೆ. ಕರಿಂಜೆಯಲ್ಲಿ ಉತ್ತಮ ಹೈನುಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿರುವ ಭಾಸ್ಕರ ಶೆಟ್ಟಿ, ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಲು ಉಳಿದವರಿಗೆ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.

ವರದಿ: ಪ್ರೇಮಶ್ರೀ ಕಲ್ಲಬೆಟು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News