ಮಂಗಳೂರು ದಸರಾಕ್ಕೆ ‘ಅಕ್ರೆಲಿಕ್‌ ವರ್ಣಾಲಂಕಾರ’ದ ಮೆರುಗು!

Update: 2016-09-30 12:20 GMT

ಮಂಗಳೂರು, ಸೆ.30: ನಗರ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಆಚರಿಸಲ್ಪಡುವ ಮಂಗಳೂರು ದಸರಾದ ಅಂಗವಾಗಿ ನವದುರ್ಗೆಯರು ಹಾಗೂ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಲಾಗುವ ದರ್ಬಾರ್ ಮಂಟಪಕ್ಕೆ ‘ಅಕ್ರೆಲಿಕ್’ ವರ್ಣಾಲಂಕಾರ ಈ ಬಾರಿಯ ವಿಶೇಷತೆಯಾಗಿದೆ.

ಕ್ಷೇತ್ರದ ನವೀಕರಣದ ರುವಾರಿ ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಕಳೆದ 26 ವರ್ಷಗಳಿಂದ ವೈಭವದ ದಸರಾ ಆಚರಣೆ ‘ಮಂಗಳೂರು ದಸರಾ’ ಎಂದೇ ಜಗತ್ಪ್ರಸಿದ್ಧಗೊಂಡಿದೆ. ದೇಶ ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಮಂಗಳೂರು ದಸರಾದ ಅಂಗವಾಗಿ ಈಗಾಗಲೇ ನಗರವು ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದೆ. ಸಂಜೆಯಾಗುತ್ತಿದ್ದಂತೆಯೇ ವಿದ್ಯುತ್ ದೀಪಗಳು ಬೆಳಗಿ ಮಂಗಳೂರು ನಗರವೇ ಝಗಮಿಸಲಾರಂಭಿಸಿದೆ. ಇದೇ ವೇಳೆ ಕುದ್ರೋಳಿ ಕ್ಷೇತ್ರವೂ ಸುಣ್ಣ ಬಣ್ಣಗಳೊಂದಿಗೆ ಹೊಸ ಮೆರುಗನ್ನು ಪಡೆದಿದೆ.

ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದು, ನವದುರ್ಗೆಯರು ಹಾಗೂ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಲಾಗುವ ಕಲ್ಯಾಣ ಮಂಟಪವೂ ಪ್ರತಿ ವರ್ಷದಂತೆ ಈ ಬಾರಿಯೂ ವಿಭಿನ್ನ ಶೈಲಿಯ ಆಕರ್ಷಕ ಹೊಸ ವಿನ್ಯಾಸದಲ್ಲಿ ಅಲಂಕಾರಗೊಂಡಿದೆ. ಮಂಗಳೂರು ದಸರಾದ ದರ್ಬಾರ್ ಮಂಟಪದಲ್ಲಿನ ಶಾರದಾ ಮಾತೆ ಪ್ರತಿಷ್ಠಾಪಿಸಲ್ಪಡುವ ವೇದಿಕೆಯು ಸಂಪೂರ್ಣ ಅಕ್ರೆಲಿಕ್ ವರ್ಣಾಂಲಕಾರದ ಜತೆಗೆ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಆಕರ್ಷಣೆಯೊಂದಿಗೆ ವೀಕ್ಷಕರಿಗೆ ಮಂಗಳೂರು ದಸರಾದ ಹೊಸ ಅನುಭವವನ್ನು ನೀಡಲಿದೆ. ನವದುರ್ಗೆಯರು ಹಾಗೂ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಲಾಗುವ ದರ್ಬಾರ್ ಮಂಟಪವನ್ನು ವಿಶೇಷ ಅಲಂಕಾರಗಳೊಂದಿಗೆ ಕಳೆದ 25 ವರ್ಷಗಳಿಂದ ಮುಲ್ಕಿಯ ಸುವರ್ಣ ಆರ್ಟ್ಸ್‌ನ ಚಂದ್ರಶೇಖರ ಸುವರ್ಣ ಹಾಗೂ ತಂಡದಿಂದ ಸಜ್ಜುಗೊಳಿಸಲಾಗುತ್ತಿದೆ.

ಅರಮನೆ ದರ್ಬಾರನ್ನು ಹೋಲುವ ರೀತಿಯಲ್ಲಿ ಪ್ರತಿ ವರ್ಷ ಹೊಸ ಹೊಸ ವಿನ್ಯಾಸಗಳೊಂದಿಗೆ ಮಂಟಪವನ್ನು ಅಲಂಕಾರಗೊಳಿಸಲಾಗುತ್ತಿದೆ. ಕಳೆದ ವರ್ಷ ಗೋಲ ಗುಮ್ಮಟ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದ್ದ ದರ್ಬಾರ್ ಮಂಟಪವು ಈ ಬಾರಿ, ಅಕ್ರಾಲಿಕ್‌ನ ವಿಭಿನ್ನ ವೈಭವದಲ್ಲಿ ರೂಪುಗೊಂಡಿದೆ. ‘‘ಕ್ಷೇತ್ರದಲ್ಲಿ 25ನೆ ವರ್ಷದ ದರ್ಬಾರ್ ಮಂಟಪ ರಚನೆಯನ್ನು ನಮ್ಮ ತಂಡ ಮಾಡಿದೆ. ಕಳೆದ ಸುಮಾರು 18 ದಿನಗಳಿಂದ ರಾತ್ರಿ ಹಗಲು ನವದುರ್ಗೆಯರು ಹಾಗೂ ಶಾರದಾ ಮಾತೆಯ ಮಂಟಪವನ್ನು ಅಲಂಕಾರಗೊಳಿಸುವ ಕಾರ್ಯ ನಮ್ಮ ತಂಡದ 24 ಮಂದಿ ಸದಸ್ಯರಿಂದ ನಡೆಯುತ್ತಿದೆ’’ ಎಂದು ಚಂದ್ರಶೇಖರ್ ಸುವರ್ಣ ವಿವರ ನೀಡಿದರು.

‘‘ಪ್ರತಿ ವರ್ಷ ಮಂಗಳೂರು ದಸರಾಕ್ಕೆ ದೇಶ ವಿದೇಶಗಳಿಂದಲೂ ಸೇರಿದಂತೆ ಲಕ್ಷಾಂತರ ಮಂದಿ ಸಾಕ್ಷಿಯಾಗುತ್ತಿದ್ದಾರೆ. ಪ್ರತಿ ವರ್ಷ ಕ್ಷೇತ್ರದ ಆಡಳಿತ ಮಂಡಳಿಯ ಸಲಹೆಯಂತೆ ಮಂಟಪವನ್ನು ಹೊಸ ಹೊಸ ವಿನ್ಯಾಸಗಳೊಂದಿಗೆ ಸಜ್ಜುಗೊಳಿಸುವ ಮೂಲಕ ಮಂಗಳೂರು ದಸರಾವನ್ನು ಮತ್ತಷ್ಟು ಆಕರ್ಷಕವಾಗಿಸಲು ಪ್ರಯತ್ನಿಸಲಾಗುತ್ತಿದೆ’’ ಎಂದು ಅವರು ಹೇಳುತ್ತಾರೆ.

ನವರಾತ್ರಿಯ ಕೊನೆ ದಿನ 90 ಅಟ್ಟಿ ಕಸ್ತೂರಿ ಮಲ್ಲಿಗೆ!

ನವರಾತ್ರಿಯ ಮೊದಲ ದಿನ (ಈ ಬಾರಿ ಅಕ್ಟೋಬರ್ 1ರಂದು) ಪ್ರತಿಷ್ಠಾಪನೆಗೊಳ್ಳಲಿರುವ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತದೆ. ಬಳಿಕ ಪ್ರತಿ ದಿನ ಬಣ್ಣದ ಆಕರ್ಷಕ ಸೀರೆಯೊಂದಿಗೆ ಶಾರದಾ ಮಾತೆಗೆ ಅಲಂಕಾರಗಳನ್ನು ನಡೆಸಲಾಗುತ್ತದೆ. ಕೊನೆಯ ದಿನ ವಿಶೇಷ ಕಚ್ಚೆ ಸೀರೆಯ ವಿಶೇಷ ಅಲಂಕಾರದ ಜತೆಗೆ ಶಾರದಾ ಮಾತೆಗೆ ಕಸ್ತೂರಿ ಮಲ್ಲಿಗೆ ಜಲ್ಲಿ (ಮಲ್ಲಿಗೆಯ ಕೇಶಾಲಂಕಾರ) ಹಾಕಲಾಗುತ್ತದೆ.

ಈ ಅಲಂಕಾರಕ್ಕಾಗಿ ಸುಮಾರು 90 ಅಟ್ಟಿ ಕಸ್ತೂರಿ ಮಲ್ಲಿಗೆ (ಒಂದು ಅಟ್ಟಿಯಲ್ಲಿ ನಾಲ್ಕು ಚೆಂಡು)ಯನ್ನು ಬಳಸಲಾಗುತ್ತದೆ. ಜತೆಗೆ ಗುಲಾಬಿ ಎಸಳುಗಳ ಮೂಲಕ ವಿಶೇಷ ಜಲ್ಲಿಯನ್ನು ಹಾಕಲಾಗುತ್ತದೆ ಎನ್ನುತ್ತಾರೆ ವೃತ್ತಿಯಲ್ಲಿ ಬ್ಯೂಟಿಶಿಯನ್ ಹಾಗೂ ಕಳೆದ ಐದು ವರ್ಷಗಳಿಂದ ಶಾರದಾ ಮಾತೆ ಹಾಗೂ ನವದುರ್ಗೆಯರ ಅಲಂಕಾರದಲ್ಲಿ ತೊಡಗಿಕೊಂಡಿರುವ ರಾಧಿಕಾ ಭಟ್. ಅಂತೂ, ಈ ಬಾರಿ ಹೊಸ ವಿನ್ಯಾಸ, ಹೊಸ ಮೆರುಗಿನಿಂದ ಮಂಗಳೂರು ದಸರಾದಂಗವಾಗಿ ಭಕ್ತರು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಗೋಕರ್ಣನಾಥ ಕ್ಷೇತ್ರ ಸರ್ವಾಲಂಕಾರಗೊಂಡಿದೆ.

ನಾಳೆ ನವದುರ್ಗೆಯರು, ಶಾರದಾ ಮಾತೆ ಪ್ರತಿಷ್ಠಾಪನೆ
  
ನವರಾತ್ರಿ ಉತ್ಸವದ ಅಂಗವಾಗಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ದರ್ಬಾರ್ ಮಂಟಪದಲ್ಲಿ ಅಕ್ಟೋಬರ್ 1ರಂದು ಬೆಳಗ್ಗೆ 11.15ಕ್ಕೆ ಶಾರದಾ ಮಾತೆ ಹಾಗೂ ನವದುರ್ಗೆಯರ ವಿಗ್ರಹಗಳ ಪ್ರತಿಷ್ಠಾಪನೆ ನಡೆಯಲಿದೆ. ಮಂಗಳೂರು ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಕ್ಷೇತ್ರದ ನವೀಕರಣದ ರುವಾರಿ ಜನಾರ್ದನ ಪೂಜಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News