ಅ.2ರಂದು ರಾಮಕೃಷ್ಣ ಮಿಶನ್‌ನ 3ನೆ ಹಂತದ ಸ್ವಚ್ಛ ಅಭಿಯಾನಕ್ಕೆ ಚಾಲನೆ
ಮಂಗಳೂರು, ಸೆ. 30: ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್‌ನ ‘ಸ್ವಚ್ಛ ಮಂಗಳೂರು’ ಅಭಿಯಾನದ ತೃತೀಯ ಹಂತದ ಕಾರ್ಯಕ್ರಮಕ್ಕೆ ಗಾಂಧಿ ಜಯಂತಿಯಂದು ಚಾಲನೆ ನೀಡಲಾಗುವುದು.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದ, 3 ನೇ ಹಂತದ ಅಭಿಯಾನದಲ್ಲಿ 40 ತಂಡಗಳು 40 ರವಿವಾರಗಳಂದು ನಗರದ ವಿವಿಧೆಡೆ 400 ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸಲಿವೆ ಎಂದರು. ಅ. 2 ರಂದು ಬೆಳಗ್ಗೆ 7.30 ಕ್ಕೆ ಈ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ರಾಮಕೃಷ್ಣ ಮಿಶನ್‌ನ ಮುಖ್ಯ ಕೇಂದ್ರ ಕೊಲ್ಕತ್ತಾದಿಂದ ಸಹ ಪ್ರಧಾನ ಕಾರ್ಯದರ್ಶಿ ಸ್ವಾಮಿ ಬೋಧಸಾರಾನಂದಜಿ ಮಹಾರಾಜ, ನಿಟ್ಟೆ ವಿಶ್ವ ವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ, ಡಾ. ಬಿ.ಎಂ. ಹೆಗ್ಡೆ, ಎಂ.ಆರ್.ಪಿ.ಎಲ್. ಚ್ೀ ಮೆನೇಜರ್ ಪ್ರಸಾದ್, ಶಾಸಕ ಜೆ.ಆರ್. ಲೋಬೊ, ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್ ಮುಂತಾದವರು ಭಾಗವಹಿಸಲಿದ್ದಾರೆ. 75 ಮಂದಿ ಪೌರ ಕಾರ್ಮಿಕರಿಗೆ ಗೌರವಾರ್ಪಣೆ, 40 ತಂಡಗಳ ಮುಖ್ಯಸ್ಥರಿಗೆ ಸ್ವಚ್ಛತಾ ಪರಿಕರಗಳ ವಿತರಣೆ ನಡೆಯಲಿದೆ. ಬಳಿಕ ಎಲ್ಲಾ 40 ತಂಡಗಳಿಂದ ಮಂಗಳಾ ದೇವಿ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯುವುದು. 9 ಗಂಟೆಗೆ ‘ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮನಸ್ಸು’ ಕಾರ್ಯಾಗಾರ ನಡೆಯಲಿದ್ದು, ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಇದಕ್ಕಾಗಿ 4000 ಸ್ವಯಂ ಸೇವಕರು ಸಿದ್ಧಕೊಂಡಿದ್ದು, ವಾರದಿಂದ ವಾರಕ್ಕೆ ನಿರಂತರತೆ ಕಾಪಾಡುವುದಕ್ಕಾಗಿ ಪ್ರತೀ ರವಿವಾರ 10 ತಂಡಗಳು ಕಾರ್ಯನಿರ್ವಹಿಸುವಂತೆ ಯೋಜನೆಯನ್ನು ರೂಪಿಸಲಾಗಿದೆ. ಈಗಾಗಲೇ ತಂಡಗಳೊಂದಿಗೆ ಮುಕ್ತ ಸಂವಾದ ನಡೆಸಲಾಗಿದೆ ಎಂದು ಅವರು ಹೇಳಿದರು. 5 ಲಕ್ಷ ರೂ. ವೆಚ್ಚದಲ್ಲಿ 5000 ಸ್ವಚ್ಛತಾ ಸಲಕರಣೆಗಳನ್ನು ಖರೀದಿಸಲಾಗಿದೆ. 5000 ಕ್ಕೂ ಮಿಕ್ಕಿ ಟೀ ಶರ್ಟ್‌ಗಳನ್ನು ಹಂಚುವ ಕಾರ್ಯ ನಡೆದಿದೆ. ನಿಟ್ಟೆ ಶಿಕ್ಷಣ ಸಂಸ್ಥೆ ಮತ್ತು ಎಂ.ಆರ್.ಪಿ.ಎಲ್. ಕಂಪೆನಿ ಅಭಿಯಾನಕ್ಕೆ ಸಹಾಯ ಮಾಡಲು ಮುಂದೆ ಬಂದಿವೆ ಎಂದು ರಾಮಕೃಷ್ಣ ಮಠದ ಅಧ್ಯಕ್ಷರೂ ಆದ ಜಿತ ಕಾಮಾನಾಂದ ಸ್ವಾಮೀಜಿ ಅವರು ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಅಭಿಯಾನ ಸಹ ಸಂಚಾಲಕ ಸ್ವಾಮಿ ಏಕ ಗಮ್ಯಾನಂದ, ಕ್ಯಾ. ಗಣೇಶ್ ಕಾರ್ಣಿಕ್, ಉಮಾನಾಥ ಕೋಟೆಕಾರ್, ದಿಲ್‌ರಾಜ್ ಆಳ್ವ ಉಪಸ್ಥಿತರಿದ್ದರು.