ಅ.2ರಂದು ಪಂಚಾಯತ್ ರಾಜ್ (2ನೆ ತಿದ್ದುಪಡಿ)ಅಧಿನಿಯಮ ಜಾರಿಗೆ ಸಿಎಂಗೆ ಮನವಿ
ಮಂಗಳೂರು,ಸೆ.30:ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಅಧಿನಿಯಮ (2ನೆ ತಿದ್ದುಪಡಿ)2015ರ ಅನುಷ್ಟಾನದ ಬಗ್ಗೆ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಲಾಗಿದೆ ಎಂದ ಜನಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಎನ್. ಶೀನ ಶೆಟ್ಟಿ ತಿಳಿಸಿದ್ದಾರೆ.
ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯ ಅಡಿಪಾಯವಾಗಿರುವ ಪಂಚಾಯತ್ ರಾಜ್ ಸಂಸ್ಥೆಗಳನ್ನು ಬಲವರ್ಧನೆಗೊಳಿಸಿ ಗ್ರಾಮ ಪಂಚಾಯತ್‌ಗಳನ್ನು ಸ್ವಾವಲಂಬಿಯಾಗಿ, ಸ್ವಯಂ ಆಡಳಿತ ನಡೆಸುವ ಪೂರ್ಣ ಪ್ರಮಾಣದ ಗ್ರಾಮ ಸರಕಾರಗಳಾಗಿ ಪರಿವರ್ತನೆಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಅಧಿನಿಯಮ -2015 ಚಾರಿತ್ರಿಕ ಅಧಿನಿಯಮ ಫೆ.25,2016ರಂದು ಜಾರಿಗೆ ಬರಬೇಕಾಗಿತ್ತು. ಆದರೆ ಸದ್ರಿ ಅಧಿನಿಯಮದ ಅನುಷ್ಟಾನ ಇನ್ನೂ ಆರಂಭವಾಗಿಲ್ಲ. ಈ ಬಗ್ಗೆ ತುರ್ತು ಕ್ರಮ ಕೈ ಗೊಂಡು ಅಧಿನಿಯಮದ ಪ್ರಕರಣ ಸಂಖ್ಯೆ 3ರಂತೆ ಜನವಸತಿ ಪ್ರದೇಶಗಳನ್ನು ಅಧಿ ಸೂಚಿಸಿ ಘೋಷಿಸುವ ಮತ್ತು ಪ್ರಕರಣ ಸಂಖ್ಯೆ 61ರಂತೆ ಸ್ಥಾಯಿ ಸಮಿತಿಗಳನ್ನು ಪುನರಚಿಸಿ ಅಧಿನಿಯಮವನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವ ಕಾರ್ಯವನ್ನು ಅ,2ರಂದು ಆರಂಭಿಸಿ ಗಾಂಧಿಜಯಂತಿಯ ದಿನವನ್ನು ರಾಜ್ಯಾದ್ಯಂತ ಗ್ರಾಮ ಸ್ವರಾಜ್ ದಿನವಾಗಿ ಅರ್ಥಪೂರ್ಣವಾಗಿ ಆಚರಿಸಲು ಕ್ರಮ ಕೈ ಗೊಳ್ಳಬೇಕಾಗಿ ಜನಶಿಕ್ಷಣ ಟ್ರಸ್ಟ್ ನ ನಿರ್ದೇಶಕರು ಹಾಗೂ ಒಂಬುಡ್ಸ್‌ಮೆನ್ ಮನವಿ ಮಾಡಿದ್ದಾರೆ.