×
Ad

ನದಿಗೆ ಹಾರಿದ್ದ ಯುವತಿಯ ಮೃತದೇಹ ಪತ್ತೆ

Update: 2016-09-30 22:09 IST

ಬ್ರಹ್ಮಾವರ, ಸೆ.30: ಕಲ್ಯಾಣಪುರ ಸೇತುವೆಯಿಂದ ಸೆ.28ರ ಸಂಜೆ ವೇಳೆ ಸ್ವರ್ಣ ನದಿಗೆ ಹಾರಿ ನಾಪತ್ತೆಯಾಗಿದ್ದ ಪುುತ್ತೂರು ಗ್ರಾಮ ಸುಬ್ರಹ್ಮಣ್ಯ ನಗರದ ಚಂದ್ರಶೇಖರ್ ಎಂಬವರ ಮಗಳು ಚೈತ್ರಾ(18)ಳ ಮೃತದೇಹ ಇಂದು ಮುಂಜಾನೆ ಇಲ್ಲಿಗೆ ಸಮೀಪದ ಹೊನ್ನಾಳದ ಸೀತಾನದಿಯಲ್ಲಿ ಪತ್ತೆಯಾಗಿದೆ.

ಬುಧವಾರ ಸಂಜೆ ಹಾಗೂ ಗುರುವಾರ ಇಡೀ ದಿನ ಸೇತುವೆ ಕೆಳಗೆ, ಹೊನ್ನಾಳ ಹೊಳೆಗಳಲ್ಲಿ ಬ್ರಹ್ಮಾವರ ಪೊಲೀಸರು, ಅಗ್ನಿ ಶಾಮಕದಳದ ಸಿಬ್ಬಂದಿಗಳು ಹಾಗೂ ಸ್ಥಳೀಯರು ದೋಣಿಯಲ್ಲಿ ಹುಡುಕಾಟ ನಡೆಸಿದ್ದರೂ ದೇಹ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ 8:30ರ ಸುಮಾರಿಗೆ ಹೊನ್ನಾಳ ಮಸೀದಿ ಸಮೀಪ ಸೀತಾನದಿಯ ನೀರಿನಲ್ಲಿ ಅವಳ ದೇಹ ಪತ್ತೆಯಾಗಿದ್ದು, ಅದನ್ನು ಆಕೆಯ ಹೆತ್ತವರಿಗೆ ಹಸ್ತಾಂತರಿಸಲಾಗಿದೆ ಎಂದು ಬ್ರಹ್ಮಾವರ ಪೊಲೀಸರು ತಿಳಿಸಿದ್ದಾರೆ.

ಅಂಬಲಪಾಡಿಯ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆಕೆ, ಸಂಜೆ ಮೊಬೈಲ್‌ನಲ್ಲಿ ಮಾತನಾಡುತ್ತ ಒಮ್ಮೆಲೆ ಮೊಬೈಲ್ ಹಿಡಿದುಕೊಂಡು ಸೇತುವೆಯಿಂದ ನದಿಗೆ ಹಾರಿದ್ದಳು. ಆದರೆ ಆಕೆಯ ಆತ್ಮಹತ್ಯೆಗೆ ಕಾರಣವಿನ್ನೂ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News