×
Ad

ಪಿಒಕೆಯಲ್ಲಿ ಭಾರತದ ಸೀಮಿತ ದಾಳಿಗೆ ಅಫ್ಘಾನಿಸ್ತಾನ ಬೆಂಬಲ

Update: 2016-09-30 23:45 IST

ಹೊಸದಿಲ್ಲಿ, ಸೆ.30: ಭಾರತವು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕರ ಶಿಬಿರಗಳ ಮೇಲೆ ನಡೆಸಿರುವ ಸೀಮಿತ ದಾಳಿಯನ್ನು ಅಫ್ಘಾನಿಸ್ತಾನವಿಂದು ಬೆಂಬಲಿಸಿದೆ. ಇದೊಂದು 'ಸ್ವಯಂರಕ್ಷಣಾ' ದಾಳಿಯಾಗಿದ್ದು, ಭಯೋತ್ಪಾದನಾ ಪಿಡುಗಿನ ವಿರುದ್ಧ 'ಕಠಿಣ' ಹಾಗೂ 'ಅಪಾಯಕಾರಿ' ನಿರ್ಧಾರ ಕೈಗೊಳ್ಳುವ ಸಮಯ ಬಂದಿದೆಯೆಂಬುದನ್ನು ಪಾಕಿಸ್ತಾನಕ್ಕೆ ಒತ್ತಿ ಹೇಳುವ ಪ್ರಬಲ ಸಂದೇಶವಾಗಿದೆಯೆಂದು ಅದು ಹೇಳಿದೆ.

ತನ್ನ ದೇಶವು ಭಯೋತ್ಪಾದಕ ಗುಂಪುಗಳ ನಡುವೆ ವ್ಯತ್ಯಾಸ ಎಣಿಸುವುದಿಲ್ಲ. ಅದು ವಿಶ್ವದ ಯಾವುದೇ ದೇಶಕ್ಕೆ ಅಪಾಯ ಹಾಗೂ ಬೆದರಿಕೆ ಒಡ್ಡುತ್ತಿರುವ ಇಂತಹ ಗುಂಪುಗಳಿಗೆ ವಿರುದ್ಧವಾಗಿದೆಯೆಂದು ಭಾರತದ ಅಫ್ಘಾನಿ ರಾಯಭಾರಿ ಶೈದಾ ಅಬ್ದಾಲಿ ತಿಳಿಸಿದ್ದಾರೆ.
ದಕ್ಷಿಣ ಏಶ್ಯದ ವಿದೇಶಿ ಪತ್ರಕರ್ತರ ಕ್ಲಬ್‌ನಲ್ಲಿ ಪತ್ರಕರ್ತರು, ಪಿಒಕೆಯಲ್ಲಿ ಭಾರತ ನಡೆಸಿದ ಸೀಮಿತ ದಾಳಿಯ ಬಗ್ಗೆ ಅಫ್ಘಾನಿಸ್ತಾನದ ನಿಲುವೇನೆಂದು ಪ್ರಶ್ನಿಸಿದಾಗ, ನೆರೆಯ ರಾಷ್ಟ್ರಗಳ ಮೇಲೆ ದಾಳಿ ನಡೆಸಲು ಭಯೋತ್ಪಾದಕರಿಗೆ ಯಾರೂ ತಮ್ಮ ಪ್ರದೇಶವನ್ನು ಸುರಕ್ಷಿತ ಸ್ವರ್ಗವನ್ನಾಗಿಸಬಾರದೆಂಬುದು ತಮ್ಮ ಆಸೆಯಾಗಿದೆಯೆಂದು ಅವರುತ್ತರಿಸಿದರು.
 ಭಯೋತ್ಪಾದಕ ಗುಂಪುಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಮುಂದುವರಿದರೆ, ಅಂತಹ ಗುಂಪುಗಳ ವಿರುದ್ಧ ಸ್ವಯಂ ರಕ್ಷಣಾ ಕಾರ್ಯಾಚರಣೆ ಇಂತಹ ಸೀಮಿತ ದಾಳಿಗಳ ರೂಪದಲ್ಲಿರುವುದು ಆಶ್ಚರ್ಯವಲ್ಲವೆಂದು ಅಬ್ದಾಲಿ ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News