ಹಿರಿಯ ನಾಗರಿಕರಿಗೆ ಆರೋಗ್ಯ ನೀತಿ ಕುರಿತು ಆರೋಗ್ಯ ಸಚಿವರ ಜೊತೆಗೆ ಚರ್ಚೆ: ಸಚಿವ ಖಾದರ್

Update: 2016-10-01 08:14 GMT

ಮಂಗಳೂರು, ಅ.1: ಹಿರಿಯ ನಾಗರಿಕರ ಆರೋಗ್ಯದ ಕುರಿತಂತೆ ಕಾಳಜಿ ವಹಿಸುವ ನಿಟ್ಟಿನಲ್ಲಿ ತರಬೇತಿ ನೀಡುವಂತಹ ಪ್ರಕ್ರಿಯೆಗಳು ಅಗತ್ಯವಾಗಿದ್ದು, ಈ ಕುರಿತಂತೆ ಹಿರಿಯ ನಾಗರಿಕರಿಗೆ ಆರೋಗ್ಯ ನೀತಿಯ ಅಗತ್ಯವಿದೆ. ಈ ಬಗ್ಗೆ ರಾಜ್ಯದ ಆರೋಗ್ಯ ಸಚಿವರ ಜತೆ ಚರ್ಚಿಸುವುದಾಗಿ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಇಂದು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿರಿಯ ನಾಗರಿಕರ ಆರೋಗ್ಯಕ್ಕೆ ಸಂಬಂಧಿಸಿ ಹೆಚ್ಚಿನ ಕಾಳಜಿ ಅಗತ್ಯವಾಗಿದೆ. ಹಿರಿಯರನ್ನು ಆದರ, ಪ್ರೀತಿಯಿಂದ ನೋಡಿಕೊಳ್ಳುವ, ಅವರನ್ನು ಆರೈಕೆ ಮಾಡುವವರು ಬಹಳ ಸೂಕ್ಷ್ಮ ಮನೋಭಾವನೆಯನ್ನು ಹೊಂದಬೇಕು. ಇದಕ್ಕಾಗಿ ತರಬೇತಿ ಕೋರ್ಸ್‌ಗಳನ್ನು ಆರಂಭಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಹಿರಿಯ ತ್ಯಾಗಮಯ ಜೀವನ, ಆದರ್ಶಗಳು ದೇಶದ ಸಂಪತ್ತು. ಅವರ ಅನುಭವ ಹಾಗೂ ಮಾರ್ಗದರ್ಶನ ಪಡೆದುಕೊಂಡು ಯುವ ಜನತೆ ಮುಂದುವರಿಯಬೇಕು. ಸಮಾಜದಲ್ಲಿ ಇಂದು ಅವಿಭಕ್ತ ಕುಟುಂಬ ಪದ್ಧತಿ ದೂರವಾಗಿರುವುದು ಯುವ ಸಮುದಾಯಕ್ಕೆ ತುಂಬಾ ನಷ್ಟವಾಗಿದೆ. ಹಿರಿಯರ ಆದರ್ಶಗಳು, ಆಚಾರ ವಿಚಾರಗಳ ಬಗ್ಗೆ ತಿಳಿಯಲು ಇಂದು ಅವಕಾಶಗಳು ಕಡಿಮೆಯಾಗುತ್ತಿವೆ. ಈ ಬಗ್ಗೆ ಹೆಚ್ಚಿನ ಗಮನ ಅಗತ್ಯ ಎಂದವರು ಅಭಿಪ್ರಾಯಿಸಿದರು.

ಶಾಸಕ ಜೆ.ಆರ್.ಲೋಬೊ ಮಾತನಾಡಿ, ಹಿರಿಯರ ಜ್ಞಾನ, ಯುವಕರ ಶಕ್ತಿಒಟ್ಟು ಸೇರಿದಾಗ ದೇಶವನ್ನು ಕಟ್ಟುವ ಸಾಮರ್ಥ್ಯ ಸೃಷ್ಟಿಯಾಗುತ್ತದೆ ಎಂದರು.

ಶಾಸಕ ಬಿ.ಎ.ಮೊಯ್ದೀನ್ ಬಾವ, ಮೇಯರ್ ಹರಿನಾಥ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ನಿವೃತ್ತ ಬ್ಯಾಂಕ್ ಅಧಿಕಾರಿ ಎ.ದಾಮೋದರ್ ಹೆಗ್ಡೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನ ಗೌಡ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎನ್.ಆರ್.ಉಮೇಶ್, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಲೋಕೇಶ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಗಾರ್ಗಿ ಜೈನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪರ್ದೇಶಕ ಸುಂದರ್ ಪೂಜಾರಿ ಇದ್ದರು.

ಹಿರಿಯರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಾದ ಭೋಜರಾಜ ಹೆಗ್ಡೆ, ಮೈಕಲ್, ಪುಷ್ಪ, ಭವಾನಿ, ಜಯ ಶೆಟ್ಟಿ ಚಿಲಿಂಬಿ, ಕಾವೇರಮ್ಮ, ಶೀನಪ್ಪ ಸಮಗಾರ, ಶಂಕರ ಭಟ್, ಜಾನಕಿ ಇವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News