ಭಾರತವನ್ನು ಕೆಣಕಿದ ಚೀನಾ
ಹೊಸದಿಲ್ಲಿ, ಅ.1: ಸಿಂಧೂ ಜಲ ಒಪ್ಪಂದದಂತೆ ತನ್ನ ಪಾಲಿನ ನೀರಿನ ಸಂಪೂರ್ಣ ಉಪಯೋಗ ಪಡೆದು ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸುವ ಭಾರತದ ಪ್ರಯತ್ನಕ್ಕೆ ಚೀನಾ ಅಡ್ಡಗಾಲಿಕ್ಕಿದ್ದು, ಪ್ರಮುಖ ಉಪನದಿಯೊಂದಕ್ಕೆ ಟಿಬೆಟ್ ನಲ್ಲಿ ಅಣೆಕಟ್ಟು ಕಟ್ಟಲು ಮುಂದಾಗಿದೆ.
ಈ ಬಗ್ಗೆ ಚೀನಾದ ಸರಕಾರಿ ನ್ಯೂಸ್ ಏಜನ್ಸಿ ಕ್ಸಿನ್ಹುವಾ ಶುಕ್ರವಾರ ವರದಿ ಮಾಡಿದೆ. ಈ ನದಿಗೆ ಟಿಬೆಟ್‌ನಲ್ಲಿ ಯಾರ್ಲುಂಗ್ ಝಂಗ್ಬೊ ಎಂಬ ಹೆಸರಿದೆ. ಚೀನಾ ಇಲ್ಲಿ ಜಲವಿದ್ಯುತ್ ಯೋಜನೆಯನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದು ಇಲ್ಲಿ ನಿರ್ಮಿಸಲಾಗುವ ಅಣೆಕಟ್ಟಿನಿದ ನದಿ ಹರಿವಿನ ಕೆಳಗಿನ ಪ್ರದೇಶಗಳಲ್ಲಿರುವ ಬಾಂಗ್ಲಾದೇಶ ಸಹಿತ ಕೆಲ ದೇಶಗಳು ಬಾಧಿತವಾಗಲಿವೆ.
ಈ ಜಲವಿದ್ಯುತ್ ಯೋಜನೆಯ ಕಾರ್ಯ 2014ರ ಜೂನ್‌ನಲ್ಲಿ ಆರಂಭಗೊಂಡಿದ್ದು 2219ರಲ್ಲಿ ಸಂಪೂರ್ಣಗೊಳ್ಳಲಿದೆ. ಇಲ್ಲಿ ನಿರ್ಮಿಸಲಾಗುವ ಅಣೆಕಟ್ಟು 25 ಮಿಲಿಯನ್ ಕ್ಯೂಬಿಕ್ ಮೀಟರ್ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಭಾರತದತ್ತ ಹರಿಯುವ ನದಿಗಳ ಹರಿವಿನ ದಿಕ್ಕನ್ನು ಬದಲಿಸಲು ಚೀನಾ ಮಾಡಿದ ಮೊದಲನೇ ಪ್ರಯತ್ನ ಇದಲ್ಲವಾಗಿದ್ದು, 2015ರಲ್ಲಿ ಟಿಬೆಟ್‌ನಲ್ಲಿ ಅತಿ ದೊಡ್ಡ ಜಲವಿದ್ಯುತ್ ಯೋಜನೆಯನ್ನು ಸ್ಥಾಪಿಸಿದ್ದು, ಇದು ಬ್ರಹ್ಮಪುತ್ರ ನದಿ ನೀರನ್ನು ಉಪಯೋಗಿಸುತ್ತಿದೆ.
ತಾನು ನಿರ್ಮಿಸುವ ಯೋಜನೆಗಳು ಹರಿಯುವ ನೀರನ್ನು ಉಪಯೋಗಿಸುತ್ತಿವೆಯೇ ಹೊರತು ನೀರನ್ನು ಸಂಗ್ರಹಿಸುತ್ತಿಲ್ಲವೆಂದು ಚೀನಾ ಹೇಳುತ್ತಿದೆಯಾದರೂ, ಈಗ ಅದು ಬ್ರಹ್ಮಪುತ್ರ ನದಿ ನೀರನ್ನು ಉಪಯೋಗಿಸಿ ನಿರ್ಮಿಸುತ್ತಿರುವ ಜಲವಿದ್ಯುತ್ ಯೋಜನೆಯಿಂದಾಗಿ ಭಾರತದ ಈಶಾನ್ಯ ರಾಜ್ಯಗಳು ನೀರಿನ ಅಭಾವ ಹಾಗೂ ನೆರೆ ಹಾವಳಿಯನ್ನು ಎದುರಿಸಬೇಕಾದ ಪ್ರಮೇಯ ಬರಬಹುದೆಂಬ ಭೀತಿಯಿದೆ.