ಎತ್ತಿನ ಹೊಳೆ ಯೋಜನೆ ವಿರುದ್ಧ ಅ. 6ರಂದು ಸರ್ವ ಕಾಲೇಜು ವಿದ್ಯಾರ್ಥಿ ಸಂಘದಿಂದ ರಾಸ್ತಾ ರೋಕೋ
ಮಂಗಳೂರು, ಅ.1: ಎತ್ತಿನಹೊಳೆ ಯೋಜನೆಯನ್ನು ನಿಲ್ಲಿಸಬೇಕೆಂಬ ದ.ಕ. ಜಿಲ್ಲೆಯ ಜನರ ಕೂಗಿಗೆ ರಾಜ್ಯ ಸರಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘದಿಂದ ಅ. 6ರಂದು ರಾಸ್ತಾ ರೋಕೋ ಚಳವಳಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಸಂಘದ ಕಾನೂನು ಸಲಹೆಗಾರ ದಿನಕರ ಶೆಟ್ಟಿ ಮಾತನಾಡಿ, ಎತ್ತಿನಹೊಳೆ ಯೋಜನೆಯ ಕುರಿತಂತೆ ಜಿಲ್ಲೆಯ ಜನರ ವಿರೋಧದ ಬಗ್ಗೆ ರಾಜ್ಯ ಸರಕಾರದ ವರ್ತನೆ ನೋವು ತಂದಿದೆ ಎಂದರು.
ಅ.6ರಂದು ಪೂರ್ವಾಹ್ನ 11:30ಕ್ಕೆ ಬೆಸೆಂಟ್ ಸರ್ಕಲ್‌ನಲ್ಲಿ ಬೃಹತ್ ರಾಸ್ತಾ ರೋಕೋ ಚಳವಳಿ ನಡೆಯಲಿದೆ. ಕಾವೇರಿ ಹೋರಾಟಕ್ಕೆ ಸ್ಪಂದಿಸಿದ ಸರಕಾರದ ರೀತಿ ಹಾಗೂ ಎತ್ತಿನ ಹೊಳೆ ಕುರಿತಂತೆ ಸರಕಾರ ನಿಲುವು ವಿಭಿನ್ನವಾಗಿದೆ. ಈ ಮೂಲಕ ಸರಕಾರ ತುಳುನಾಡಿನ ಜನರ ಭಾವನೆಗಳನ್ನು ಕಡೆಗಣಿಸಿದೆ. ದ.ಕ. ಜಿಲ್ಲೆ ರಾಜ್ಯದಲ್ಲಿಲ್ಲವೋ ಎಂಬ ಭಾವನೆಯಂತಿದೆ. ಜಿಲ್ಲೆಯ ಜನತೆಗೆ ಅಪಮಾನ ಮಾಡುತ್ತಿದೆ ಎಂಬ ಹೋರಾಟಗಾರರ ಭಾವನೆಯನ್ನು ಸರಕಾರದ ಮುಂದಿಡಲು ವಿದ್ಯಾರ್ಥಿ ಸಂಘ ತೀರ್ಮಾನಿಸಿ ಚಳವಳಿಯನ್ನು ಆಯೋಜಿಸಿದೆ ಎಂದು ಹೇಳಿದರು.
ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಭೆ ಕರೆಯುವ ಭರವಸೆ ನೀಡಿದ್ದರು. ಆದರೆ ಆ ಬಳಿಕ ಮೂರು ಬಾರಿ ಮುಖ್ಯಮಂತ್ರಿ ಜಿಲ್ಲೆಗೆ ಭೇಟಿ ನೀಡಿದರೂ ಸಭೆ ಮಾತ್ರ ನಡೆಸಿಲ್ಲ. ಜಿಲ್ಲೆಯ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಹಾಗೂ ವಿವಿಧ ಧರ್ಮಗಳ ಧರ್ಮಗುರುಗಳ ಮಾತಿಗೂ ಸರಕಾರ ಬೆಲೆ ನೀಡುತ್ತಿಲ್ಲ ಎಂದವರು ಹೇಳಿದರು.
ಆಸ್ಕರ್ ಮನೆ ಮುಂದೆ ಪ್ರತಿಭಟನೆಗೆ ಯೋಜನೆ
ಬಿಜೆಪಿ ನಾಯಕ ಯಡಿಯೂರಪ್ಪ ಹಾಗೂ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರು ಯೋಜನೆ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆಯನ್ನು ಸಾರ್ವಜನಿಕವಾಗಿ ನೀಡಿದ್ದರು. ಜಿಲ್ಲೆಯ ಜನತೆಯೂ ಅವರ ಮೇಲೆ ವಿಶ್ವಾಸವಿರಿಸಿದ್ದರು. ಇದೀಗ ಇಬ್ಬರೂ ನಾಯಕರು ಮೌನವಾಗುವ ಮೂಲಕ ಅನ್ಯಾಯ ಮಾಡಿದ್ದಾರೆ. ಅಲ್ಲದೇ ಯೋಜನೆಗೆ ಕಾರಣರಾದ ಮಾಜಿ ಮುಖ್ಯಮಂತ್ರಿಗಳಿಬ್ಬರು ಜಿಲ್ಲೆಗೆ ಕದ್ದುಮುಚ್ಚಿ ಆಗಮಿಸುತ್ತಿದ್ದಾರೆ. ಇವರ ವಿರುದ್ದ ಈಗಾಗಲೇ ಪ್ರತಿಭಟನೆ ನಡೆದಿದೆ. ಇನ್ನುಮುಂದೆ ಆಸ್ಕರ್, ಯಡಿಯೂರಪ್ಪ ಸಹಿತ ಮಾಜಿ ಮುಖ್ಯಮಂತ್ರಿಗಳಿಬ್ಬರ ವಿರುದ್ಧವೂ ವಿದ್ಯಾರ್ಥಿ ಸಂಘದ ಪ್ರತಿರೋಧ ನೀಡಲು ತೀರ್ಮಾನಿಸಿದೆ. ಇದೇ ವೇಳೆ ಮುಖ್ಯಮಂತ್ರಿಗಳು ಭೇಟಿ ನೀಡುವ ವೇಳೆಯೂ ಪ್ರತಿರೋಧಕ್ಕೆ ಸಿದ್ಧತೆ ನಡೆಸಿದೆ ಎಂದು ದಿನಕರ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿದ್ಯಾಥಿ ಸಂಘದ ನಾಯಕರಾದ ಶಿಫಾಲ್‌ರಾಜ್, ಅಶ್ವತ್ ಕೊಟ್ಟಾರಿ, ಅಮಿತ್‌ರಾಜ್ ಬೇಕಲ, ಮಾಲಾ ಕೆ.ಜೆ., ನಿಶಿತ್ ದೇವಾಡಿಗ, ಶೈಲೇಶ್ ಕೋಟ್ಯಾನ್, ಪ್ರಜ್ವಲ್ ಪೂಜಾರಿ, ಕಾರ್ಯಾಧ್ಯಕ್ಷ ತುಷಾರ್ ಕದ್ರಿ, ಧನುಶ್ರೀ, ಜೀತರಾಜ್, ವಿವೇಕ್, ಅಂಕಿತ, ಅರ್ಚನಾ ಹಾಗೂ ನಝೀಮ್ ಉಪಸ್ಥಿತರಿದ್ದರು.