×
Ad

ಪ್ರಧಾನಿ ಮೋದಿಯವರಿಂದ 'ಮದ್ಯಮುಕ್ತ ಭಾರತ' ರೂಪುಗೊಳ್ಳಲಿ: ಡಾ.ಡಿ. ವೀರೇಂದ್ರ ಹೆಗ್ಗಡೆ

Update: 2016-10-01 17:45 IST

ಬೆಳ್ತಂಗಡಿ, ಅ.1: ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಯೋಜನೆಯಂತೆ ದೇಶದ ಸ್ವಸ್ಥ ಸಮಾಜಕ್ಕಾಗಿ ಮದ್ಯ ಮುಕ್ತ ಭಾರತವೆಂಬ ಘೋಷಣೆಯೊಂದಿಗೆ ಹೊಸ ಬದಲಾವಣೆಗೆ ಕಾರಣವಾಗಲಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಶನಿವಾರ ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಮತ್ತು ಸಹಸ್ರ ಶಿಬಿರಗಳ ಸಮಗ್ರ ವ್ಯವಸ್ಥಾಪನ ಸಮಿತಿ ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ ಸಾವಿರ ಶಿಬಿರದ ಸಹಸ್ರಾರು ಮದ್ಯವರ್ಜಿತರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿಂದೆ ಮದ್ಯವ್ಯಸನಿಗಳನ್ನು ಯಾವುದೋ ನೆಪಹೇಳಿ, ಒತ್ತಾಯದಿಂದ ಶಿಬಿರಕ್ಕೆ ಕರೆತರಬೇಕಾಗಿತ್ತು. ಆದರೆ ಈಗ ತಾವಾಗಿಯೇ ಸ್ವಯಂ ಪ್ರೇರಣೆಯಿಂದ ಶಿಬಿರದಲ್ಲಿ ಭಾಗವಹಿಸುವವರು ಅಧಿಕವಾಗಿದ್ದಾರೆ. ಇದು ಶಿಬಿರಗಳಿಂದ ದೊರೆತ ಪ್ರೇರಣೆಯಾಗಿದೆ. ಮುಂದೊಂದು ದಿನ ಇದೊಂದು ಕ್ರಾಂತಿಯಾಗಿ ಪರಿವರ್ತನೆಯಾಗಲಿದೆ. ಜ.ಜಾ.ವೇದಿಕೆಯ ಕಳೆದ 18 ವರ್ಷಗಳ ಪ್ರಯತ್ನದ ಫಲವಾಗಿ ಮದ್ಯ ಮುಕ್ತ ಪರಂಪರೆಯೇ ಬೆಳೆಯುವ ಸಾಧ್ಯತೆ ನಿಚ್ಚಳವಾಗಿದೆ ಎಂದರು.

ಸಮಾಜದ ಸ್ವಚ್ಛ ಜೀವನಕ್ಕಾಗಿ ಸ್ವಚ್ಛ ಭಾರತದಂತೆ ಮದ್ಯ ಮುಕ್ತ ಭಾರತವೂ ಮೋದಿಯವರಿಂದ ರೂಪುಗೊಳ್ಳಲಿ ಎಂದ ಹೆಗ್ಗಡೆ ಅವರು, ನಾವು ಮಾಡುವ ಕಾರ್ಯ ಮದ್ಯಮಾರಾಟಗಾರಿಗೆ ವಿರೋಧವಲ್ಲ ಎಂದು ತಿಳಿದುಕೊಳ್ಳಬೇಕು. ದುಶ್ಚಟದ ಬಗ್ಗೆ ಜನರಿಗೆ ಎಚ್ಚರಿಕೆ ಕೊಟ್ಟು ಸರಿದಾರಿಗೆ ತರುವ ಕಾರ್ಯ ಮಾಡುತ್ತಿದ್ದೇವೆ. ಇದರಲ್ಲಿ ಯಾರೂ ತಪ್ಪು ಹುಡುಕಲು ಸಾಧ್ಯವಿಲ್ಲ ಎಂದರು.

ಬಳಿಕ ಅವರು ಮದ್ಯವರ್ಜನ ಸಮಿತಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ಪ್ರಮಾಣ ಪತ್ರ ವಿತರಿಸಿದರು.

ಬೆಳಗಾವಿ ಅಥಣಿ ಮೊಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಮನಸ್ಸು ಪರಿವರ್ತನೆಯಾದಲ್ಲಿ ದೇಶದ ವ್ಯವಸ್ಥೆಯನ್ನೇ ಬದಲಿಸಬಹುದು. ಮಹಾತ್ಮ ಗಾಂಧಿ ಕಂಡ ಕನಸು, ಅವರ ತತ್ವ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾಕಾರಗೊಳ್ಳುತ್ತಿದೆ ಎಂದರು.

ಆರನೇ ಶತಮಾನ ಮಹಾವೀರ, ಬುದ್ಧನ, ಹತ್ತನೆ ಶತಮಾನವು ಪಂಪನ, ಹನ್ನೆರಡನೆ ಶತಮಾನವು ಬಸವಣ್ಣನ, ಇಪ್ಪತ್ತನೇ ಶತಮಾನವು ಗಾಂಧೀಜಿಯವರ ಯುಗವಾಗಿದ್ದರೆ ಇಪ್ಪತ್ತೊಂದನೆ ಶತಮಾನವು ಮದ್ಯವರ್ಜನ ಶಿಬಿರದ ಸಮಾವೇಶದ ಸಾರ್ಥಕ್ಯದ ಯುಗವಾಗಿದೆ. ಇಂದಿನ ಕಾರ್ಯಕ್ರಮವು ಒಂದು ಚಾರಿತ್ರಿಕ ಗಳಿಗೆಯಾಗಿದೆ. ಹಿಡಿಯಬಾರದಂತಹ ವಸ್ತುಗಳನ್ನು ಹಿಡಿದುಕೊಂಡಿದ್ದಂತಹ ಕೈಗಳು ಇಂದು ಭಾರತದ ಧ್ವಜವನ್ನು ಹಿಡಿದಿರುವುದನ್ನು ನೋಡಿದರೆ ದೇಶಕ್ಕೆ ಭವಿಷ್ಯವಿದೆ ಎಂಬ ವಿಶ್ವಾಸ ಮೂಡಿಸುತ್ತಿದೆ. ಕರ್ನಾಟಕದ ಮನೆಮನೆಗಳು ಧರ್ಮಸ್ಥಳದ ಸ್ವರೂಪ ಪಡೆದುಕೊಳ್ಳುತ್ತಿವೆ ಎಂದರು.

ಕೇಂದ್ರ ಸರಕಾರದ ಆಯುಶ್ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೊ ನಾಯಕ್ ಜನ ಜಾಗೃತಿ ವೇದಿಕೆ ಲೋಗೊ ಬಿಡುಗಡೆಗೊಳಿಸುತ್ತಾ, ಸಮಾಜವು ಬೇರೆ ಬೇರೆ ದುಶ್ಚಟಗಳಿಂದ ನಲುಗುತ್ತಿದೆ. ಅದರಲ್ಲೂ ಅಲ್ಕೋಹಾಲ್ ಸೇವನೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ದೇಶದಲ್ಲಿ ಶೇ. 13 ರಷ್ಟು ಮಂದಿ ಅಲ್ಕೋಹಾಲ್ ವ್ಯಸನಿಗಳಾಗಿದ್ದಾರೆ. ಅದರಲ್ಲೂ ಶೇ. 11 ರಷ್ಟು ಜನ ಈ ಚಟದಿಂದ ತೀವ್ರವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರತೀವರ್ಷ ಸಾವಿರಾರು ಜನರು ಇದರಿಂದಾಗಿ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಮಾರಕವಾದ ಮದ್ಯವ್ಯಸನ ವಿರುದ್ಧ ಹೆಗ್ಗಡೆಯವರು ಹಮ್ಮಿಕೊಂಡಿರುವ ಆಂದೋಲನಗಳು ಅತ್ಯಂತ ಮಾದರಿಯಾಗಿದ್ದು ಇದು ದೇಶಾದ್ಯಂತ ವಿಸ್ತರಿಸಬೇಕಾಗಿದೆ ಎಂದರು.

ಉಸ್ತುವಾರಿ ಸಚಿವ ರಮಾನಾಥ ರೈ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ, ಕಾನೂನಿನ ಅಡಿಯಲ್ಲಿ ಮದ್ಯಪಾನ ದುಶ್ಚಟಗಳನ್ನು ನಿಯಂತ್ರಿಸಲು ಅಸಾಧ್ಯವಾಗಿದೆ. ಹೀಗಾಗಿ ದುಶ್ಚಟಗಳಿಗೆ ಬಲಿಯಾಗಿರುವವರ ಮನವೊಲಿಸಿ ಮದ್ಯದಿಂದ ಮುಕ್ತರಾಗಿಸುವ ಮಹತ್ವದ ಜವಾಬ್ದಾರಿಯನ್ನು ಹೆಗ್ಗಡೆಯವರು ಮಾಡುತ್ತಿದ್ದಾರೆ. ಇದರಿಂದಾಗಿ ಎಷ್ಟೋ ಕುಟುಂಬಗಳು ನೆಮ್ಮದಿಯ ಬದುಕನ್ನು ನಡೆಸಲು ಸಾಧ್ಯವಾಗಿದೆ. ಇಂತಹ ಉತ್ತಮ ಕಾರ್ಯಗಳಿಗೆ ಸಮಾಜದ ಎಲ್ಲಾ ವರ್ಗದವರು ಬೆಂಬಲ ನೀಡಬೇಕಾದ ಅಗತ್ಯವಿದೆ ಎಂದರು.

ಬೆಂಗಳೂರು ವ್ಯಾಸ ಯೋಗ ವಿಶ್ವವಿದ್ಯಾನಿಲಯ ಅಧ್ಯಕ್ಷ ಡಾ.ಎಚ್.ಆರ್. ನಾಗೇಂದ್ರ ಪರಿವರ್ತನೆ ಎಂಬ ಸಿಡಿ ಬಿಡುಗಡೆ ಮಾಡಿ, ಮದ್ಯಪಾನದಿಂದ ಬಿಡುಗಡೆ ಎಂಬ ವಿಚಾರವನ್ನು ಹೇಳುವುದು ಸುಲಭ. ಆದರೆ ಸಂಕಲ್ಪದೊಂದಿಗೆ ಅನುಭವಕ್ಕೆ ತಂದುಕೊಳ್ಳುವುದು ಅತೀ ಕಠಿಣ. ಹೆಗ್ಗಡೆಯವರು ಆಳವಾದ ಸಂಶೋಧನೆಯಿಂದ ಶಿಬಿರಗಳ ಮೂಲಕ ಯಶಸ್ಸು ಕಂಡು ಕೊಂಡಿದ್ದಾರೆ. ಶಿಬಿರದಲ್ಲಿ ವ್ಯಸನಿಗಳಲ್ಲಿ ಪರಿವರ್ತನೆ ತಂದಿರುವುದು ಆಕರ್ಷವಾಗಿದೆ ಎಂದು ಶ್ಲಾಘಿಸಿದ ಅವರು, ಮನಸ್ಸಿನ ಶಕ್ತಿಯನ್ನು ಯೋಗದಿಂದ ಹೊಂದಲು ಸಾಧ್ಯ ಇದರಿಂದ ಡ್ರಗ್ ಎಡಿಕ್ಟ್‌ಗಳೂ ವ್ಯಸನದಿಂದ ಮುಕ್ತರಾಗಲು ಸಾಧ್ಯ ಎಂದರು.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಮ್. ಆರ್. ರಂಗಶಾಮಯ್ಯ ಸಹಾಯವಾಣಿ ಸಮರ್ಪಣೆ ಮಾಡಿದರು. ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟಿ ಡಿ.ಸುರೇಂದ್ರ ಕುಮಾರ್ ನವಜೀವನ ಗುರುತು ಬ್ಯಾಡ್ಜ್ ಬಿಡುಗಡೆಗೊಳಿಸಿದರು.

ಹೇಮಾವತೀ ವಿ. ಹೆಗ್ಗಡೆ, ಧ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್, ವ್ಯವಸ್ಥಾಪನ ಸಮಿತಿ ಗೌರವ ಸಲಹೆಗಾರ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ, ಸಂಸದ ನಳೀನ್ ಕುಮಾರ್ ಕಟೀಲು, ಶಾಸಕ ಕೆ. ವಸಂತ ಬಂಗೇರ, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ್ ಕಾಮತ್, ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್, ವೇದಿಕೆ ರಾಜ್ಯಾಧ್ಯಕ್ಷ ಸತೀಶ್ ಹೊನ್ನವಳ್ಳಿ, ವೇದಿಕೆ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್, ನಿಕಟ ಪೂರ್ವ ರಾಜ್ಯಾಧ್ಯಕ್ಷ ದೇವದಾಸ್ ಹೆಬ್ಬಾರ್, ಪ್ರಾದೇಶಿಕ ನಿರ್ದೇಶಕರಾದ ಜಯಶಂಕರ್ ಶರ್ಮ, ಕೆ. ಮಹಾವೀರ ಅಜ್ರಿ, ಆನಂದ ಸುವರ್ಣ, ಕೆ. ಬೂದಪ್ಪ ಗೌಡ, ದುಗ್ಗೇ ಗೌಡ, ಸಲಹೆ ಗಾರ ವೀರು ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸುಳ್ಯದ ಅಧ್ಯಕ್ಷ ನಾರಾಯಣ ಕೇಕಡ್ಕ, ಹೊನ್ನಾಳಿಯ ಲಿಂಗರಾಜು ಹವಳದ್, ಶಿವಮೊಗ್ಗದ ಶ್ರೀಕಾಂತ್ ಕಾಮತ್, ಬೆಳ್ತಂಗಡಿಯ ಹರೀಶ್ ಪೂಂಜ, ಹಾಸನದ ಅಣ್ಣಪ್ಪ ಶೆಟ್ಟಿ, ಕೆ.ಆರ್.ನಗರದ ಕೃಷ್ಣ ಮೂರ್ತಿ, ಶಿರಸಿಯ ಉಪೇಂದ್ರ ಪೈ, ತುಮಕೂರಿನ ಪ್ರೆಸ್ ರಾಜಣ್ಣ, ಕೊಪ್ಪದ ರಾಮಸ್ವಾಮಿ ಎಸ್.ಎನ್. ಉಪಸ್ಥಿತರಿದ್ದರು.

ಸಮಾವೇಶ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಸ್ವಾಗತಿಸಿದರು. ಕಾರ್ಯದರ್ಶಿ ವಿವೇಕ್ ವಿ.ಪಾಯಸ್ ವಂದಿಸಿದರು. ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News