ಪುಟಾಣಿ ಸುಧೀಕ್ಷಾಗೆ ‘ಹೋಪ್’ ನೀಡಿತು ನೆರವು!
ಮಂಗಳೂರು, ಅ.1: ಕಿವಿಗಳಿಂದ ಆಲಿಕೆಯ ಶಕ್ತಿಯನ್ನೇ ಹೊಂದಿಲ್ಲದೆ ಕಾಕ್ಲಿಯರ್ ಶಸ್ತ್ರ ಚಿಕಿತ್ಸೆಗೊಳಪಡಬೇಕಾದ 2 ವರ್ಷ 9 ತಿಂಗಳ ಪುಟಾಣಿಗೆ ನಗರದ ಹೋಪ್ ಫೌಂಡೇಶನ್ ಪ್ರತಿನಿಧಿಗಳು 2 ಲಕ್ಷ ರೂ.ಗಳ ನೆರವು ನೀಡಿ ಹೆತ್ತವರ ಮುಖದಲ್ಲಿ ಸಂತಸ ಮೂಡಿಸಿದ್ದಾರೆ.
ಬೆಳ್ತಂಗಡಿಯ ಮೊಗೇರಡ್ಕದ ಕೂಲಿ ಕೆಲಸ ಮಾಡುವ ವಿಜಯ್ ಕುಮಾರ್ ಮತ್ತು ಹರಿನಾಥ್ ದಂಪತಿಯ ಪುತ್ರಿ ಪುಟಾಣಿ ಸುಧೀಕ್ಷಾಳ ಶಸ್ತ್ರ ಚಿಕಿತ್ಸೆಗೆ 2 ಲಕ್ಷ ರೂ.ಗಳ ಚೆಕ್ಕನ್ನು ಇಂದು ಆಕೆಯ ಹೆತ್ತವರಿಗೆ ಜಿಲ್ಲಾ ಪಂಚಾಯತ್‌ನ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಮೂಲಕ ಹಸ್ತಾಂತರಿಸಲಾಯಿತು. ಈ ಸಂದರ್ಭ ಹೋಪ್ ಫೌಂಡೇಶನ್‌ನ ಮಹಿಳಾ ಘಟಕದ ಅಧ್ಯಕ್ಷೆ ಹಸೀನಾ ನೌಫಾಲ್ ಮತ್ತು ಉಪಾಧ್ಯಕ್ಷೆ ಲುಬೀನಾ ಉಪಸ್ಥಿತರಿದ್ದು, ಈ ಸಂದರ್ಭ ಪುಟಾಣಿಗೆ ಚಾಕಲೇಟ್ ಹಾಗೂ ಕುಟುಂಬಕ್ಕೆ ನಗದನ್ನು ನೀಡಿದರು.
ಪುಟಾಣಿ ಸುಧೀಕ್ಷಾಗೆ ಒಂದು ವರ್ಷವಾಗುತ್ತಲೇ ಮಾತನಾಡುವುದಾಗಲಿ, ಮಾತಿಗೆ ಪ್ರತಿಕ್ರಿಯೆ ಮಾಡದ್ದನ್ನು ಕಂಡು ಹೆತ್ತವರು ಗಾಬರಿಗೊಂಡಿದ್ದರು. ಇದಕ್ಕಾಗಿ ಹೆತ್ತವರು ತಮ್ಮ ಮಗಳನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಭಗವಾನ್ ಮಹಾವೀರ ಜೈನ್ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಿದಾಗ ಆಕೆಯು ಕಿವಿಗಳಲ್ಲಿ ಆಲಿಕೆಯ ಶಕ್ತಿಯನ್ನು ಹೊಂದಿಲ್ಲ ಎಂಬ ಮಾಹಿತಿಯ ಜತೆಗೆ ಪುಟಾಣಿಯ ಕಿವಿಗಳಿಗೆ ಕಾಕ್ಲಿಯರ್ ಅಳವಡಿಕೆಯ ಶಸ್ತ್ರ ಚಿಕಿತ್ಸೆ ಮಾಡಿಸಬೇಕೆಂಬ ವೈದ್ಯರು ಸೂಚಿಸಿದ್ದರು. ಅದಕ್ಕಾಗಿ ಸುಮಾರು 7.5 ಲಕ್ಷ ರೂ. ವೆಚ್ಚವಾಗುವ ಬಗ್ಗೆಯೂ ತಿಳಿಸಿದ್ದರು. ಆದರೆ ಕೂಲಿ ಮಾಡಿ ಜೀವನ ಸಾಗಿಸುವ ವಿಜಯ್ ಕುಮಾರ್ ತಮ್ಮ ಮಗಳಿಗೆ ಶ್ರವಣ ಶಕ್ತಿಯನ್ನು ಭರಿಸಲು ಅಷ್ಟೊಂದು ಖರ್ಚು ಮಾಡಲು ಶಕ್ತರಿಲ್ಲದೆ ಕಂಗಾಲಾಗಿದ್ದರು.
ಈ ನಡುವೆ ಹೆತ್ತವರು ಮುಖ್ಯಮಂತ್ರಿ ಪರಿಹಾರ ನಿಧಿಗಾಗಿ ಬೇಡಿಕೆ ಸಲ್ಲಿಸಿದ್ದರು. ಅಲ್ಲಿಂದ 2 ಲಕ್ಷ ರೂ.ಗಳ ದೊರೆಯುವ ಭರವಸೆ ದೊರೆಯಿತಾದರೂ, ಅದು ಶಸ್ತ್ರ ಚಿಕಿತ್ಸೆ ಬಳಿಕವಷ್ಟೆ ಸಿಗುವುದಾಗಿತ್ತು. ಆಸ್ಪತ್ರೆಯವರು 4.3 ಲಕ್ಷ ರೂ.ಗಳನ್ನು ಹೊಂದಿಸಿದರೆ ಶಸ್ತ್ರ ಚಿಕಿತ್ಸೆ ಆರಂಭಿಸಬಹುದು ಎಂದು ಸುಧೀಕ್ಷಾ ಹೆತ್ತವರಿಗೆ ತಿಳಿಸಿದ್ದರು. ಆ ಸಂದರ್ಭ, ಜಿಲ್ಲಾ ಪಂಚಾಯತ್‌ನ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಾಹುಲ್ ಹಮೀದ್‌ರವರು ಹೋಪ್ ಫೌಂಡೇಶನ್‌ನ ಸ್ಥಾಪಕ ಸೈಫ್ ಸುಲ್ತಾನ್‌ರವರಿಗೆ ಪುಟಾಣಿ ಸುಧೀಕ್ಷಾ ಕುರಿತಂತೆ ವಿವರ ನೀಡಿದ್ದರು. ಪುಟಾಣಿಗೆ ಡಿಸೆಂಬರ್‌ನಲ್ಲಿ 3 ವರ್ಷ ತುಂಬುವ ಮೊದಲು ಈ ಶಸ್ತ್ರ ಚಿಕಿತ್ಸೆ ನಡೆಸಬೇಕೆಂದೂ ತಿಳಿಸಲಾಗಿತ್ತು. ತಕ್ಷಣ ಮಾನವೀಯ ನೆಲೆಯಲ್ಲಿ ಪುಟಾಣಿಗೆ ನೆರವಾಗಲು ಮುಂದಾದ ಸೈಫ್ ಸುಲ್ತಾನ್‌ರವರು, ಹೋಪ್ ಫೌಂಡೇಶನ್‌ನ ಮೂಲಕ ‘ಬೇಬಿ ಸುಧೀಕ್ಷಾಗೆ ತಕ್ಷಣ ನೆರವಾಗಿ, ಸುಧೀಕ್ಷಾಳಲ್ಲಿ ನಿಮ್ಮ ಸ್ವಂತ ಮಗುವನ್ನು ಕಾಣಿರಿ’ ಎಂಬ ಅಭಿಯಾನದ ಮೂಲಕ ಸಾಮಾಜಿಕ ಜಾಲ ತಾಣದ ಮೂಲಕ ಅಭಿಯಾನ ಕೈಗೊಂಡರು. ಆ ಮೂಲಕ ಅತಿ ಕ್ಷಿಪ್ರವಾಗಿ ಸಂಗ್ರಹವಾದ 2 ಲಕ್ಷ ರೂ.ಗಳನ್ನು ಪುಟಾಣಿಗೆ ಹಸ್ತಾಂತರಿಸುವ ಮೂಲಕ ಹೋಪ್ ಫೌಂಡೇಶನ್ ಸೌಹಾರ್ದತೆಗೆ ಮಾದರಿಯಾಗಿದೆ.
ಈ ನಡುವೆ, ಪುಟಾಣಿ ಸುಧೀಕ್ಷಾಗೆ ಉಚಿತ ವೈದ್ಯಕೀಯ ತಪಾಸಣೆಗೆ ಮುಂದಾಗಿರುವ ಮಂಗಳೂರಿನ ಯುನಿಟಿ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳಿಗೆ ಹೋಪ್ ಫೌಂಡೇಶನ್‌ನ ಸಂಸ್ಥಾಪಕ ಸೈಫ್ ಸುಲ್ತಾನ್ ಕೃತಜ್ಞತೆ ಸಲ್ಲಿಸಿದ್ದಾರೆ.