×
Ad

ಅಖನೂರು ಗಡಿಯಲ್ಲಿ ಪಾಕ್ ದಾಳಿ

Update: 2016-10-01 20:31 IST

ಜಮ್ಮು,ಅ.1: ಕದನ ವಿರಾಮವನ್ನು ಮತ್ತೆ ಉಲ್ಲಂಘಿಸಿರುವ ಪಾಕಿಸ್ತಾನಿ ಸೈನಿಕರು ಶನಿವಾರ ಜಮ್ಮು-ಕಾಶ್ಮೀರದ ಅಖನೂರು ತಾಲೂಕಿನ ಪಲ್ಲನ್‌ವಾಲಾ ಮತ್ತು ಚಂಬ್ ಪ್ರದೇಶಗಳಲ್ಲಿ ನಿಯಂತ್ರಣ ರೇಖೆಯಲ್ಲಿನ ಭಾರತೀಯ ಠಾಣೆಗಳು ಮತ್ತು ನಾಗರಿಕರ ವಸತಿಗಳನ್ನು ಗುರಿಯಾಗಿಸಿಕೊಂಡು ಮಾರ್ಟ್‌ರ್ ಬಾಂಬ್‌ಗಳು ಮತ್ತು ಭಾರೀ ಮಷಿನ್‌ಗನ್‌ಗಳ ಮೂಲಕ ದಾಳಿಗಳನ್ನು ನಡೆಸಿದ್ದಾರೆ.
ನಸುಕಿನ 3:30ಕ್ಕೆ ಆರಂಭಗೊಂಡಿದ್ದ ಗುಂಡಿನ ದಾಳಿ ಬೆಳಗಿನ ಆರು ಗಂಟೆಯ ವರೆಗೂ ಮುಂದುವರಿದಿತ್ತು. ಈ ದಾಳಿಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ. ಗಡಿಯನ್ನು ಕಾಯುತ್ತಿದ್ದ ಭಾರತೀಯ ಯೋಧರು ಪರಿಣಾಮಕಾರಿಯಾಗಿ ಪ್ರತಿದಾಳಿ ಯನ್ನು ನಡೆಸಿದರು ಎಂದು ರಕ್ಷಣಾ ಮೂಲಗಳು ತಿಳಿಸಿದವು.
 ಪಾಕ್ ಸೈನಿಕರು ಬಡೂ ಮತ್ತು ಚಾನೂ ಹಳ್ಳಿಗಳನ್ನು ಗುರಿಯಾಗಿಸಿಕೊಂಡಿದ್ದರು. ನಿಯಂತ್ರಣ ರೇಖೆಯಲ್ಲಿನ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ತಮ್ಮ ಜಾನುವಾರುಗಳು ಮತ್ತು ಮನೆಗಳನ್ನು ನೋಡಿಕೊಳ್ಳಲು ಗ್ರಾಮಗಳಿಗೆ ಮರಳುತ್ತಿದ್ದ ಕೆಲವು ನಿವಾಸಿಗಳನ್ನು ಗುರಿಯಾಗಿಸಿಕೊಂಡು ಪಾಕ್ ದಾಳಿಯನ್ನು ನಡೆಸಿದೆ ಎಂದು ಪೊಲೀಸರು ತಿಳಿಸಿದರು.
ಬಡೂ ಗ್ರಾಮದಲ್ಲಿ ಪಾಕಿಗಳು ಹಾರಿಸಿದ ಗುಂಡುಗಳು ತಗುಲಿ ಕೆಲವು ಮನೆಗಳಿಗೆ ಹಾನಿಯುಂಟಾಗಿದೆ ಎಂದರು.
ಇದು ಕಳೆದ ಐದು ದಿನಗಳಲ್ಲಿ ಜಮ್ಮು-ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದಿಂದ ಐದನೆಯ ಕದನ ವಿರಾಮ ಉಲ್ಲಂಘನೆಯಾಗಿದೆ.
ಭಾರತವು ಸೆ.29ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ಶಿಬಿರಗಳ ಮೇಲೆ ಸೀಮಿತ ದಾಳಿಗಳನ್ನು ನಡೆಸಿದ ಬಳಿಕ ಪಾಕಿಸ್ತಾನವು ಗಡಿಯಾಚೆಯಿಂದ ದಾಳಿಗಳನ್ನು ಹೆಚ್ಚಿಸಿದೆ.

ನಿನ್ನೆಯೂ ಪಾಕ್ ಸೈನಿಕರು ಅಖನೂರು ವಿಭಾಗದ ನಿಯಂತ್ರಣ ರೇಖೆಯ ಪಲ್ಲನ್‌ವಾಲಾ, ಚಾಪ್ರಿಯಲ್ ಇತ್ಯಾದಿ ಕಡೆಗಳಲ್ಲಿ ದಾಳಿಗಳನ್ನು ನಡೆಸಿದ್ದರು ಎಂದು ಜಮ್ಮು ಜಿಲ್ಲಾಧಿಕಾರಿ ಸಿಮ್ರನ್‌ದೀಪ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News