×
Ad

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಸಮೀಕ್ಷೆಯಲ್ಲಿ ಮುಂದಿರುವವರು ಯಾರು ?

Update: 2016-10-01 22:41 IST

ವಾಶಿಂಗ್ಟನ್,ಅ.1: ಅಮೆರಿಕ ಅಧ್ಯಕ್ಷೀಯ ಚುನಾವಣೆ ಕುರಿತ ನೂತನ ಸಮೀಕ್ಷೆಯು ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್, ತನ್ನ ಎದುರಾಳಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ಗಿಂತ ಮುನ್ನಡೆ ಸಾಧಿಸಿದ್ದಾರೆಂದು ಹೇಳಿದೆ.

ಕೆಲವೇ ದಿನಗಳ ಹಿಂದೆ ಉಭಯ ಅಭ್ಯರ್ಥಿಗಳ ನಡುವೆ ಪ್ರಪ್ರಥಮ ಟಿವಿ ಚರ್ಚಾ ಕಾರ್ಯಕ್ರಮ ಪ್ರಸಾರವಾದ ಬಳಿಕ ಹಿಲರಿ ಅವರಿಗೆ ಶೇ.43ರಷ್ಟು ಮತದಾರರು ಒಲವು ತೋರಿದ್ದಾರೆ. ಟ್ರಂಪ್‌ಗೆ ಶೇ.40ರಷ್ಟು ಮತದಾರರ ಬೆಂಬಲ ದೊರೆತಿರುವುದಾಗಿ ಫಾಕ್ಸ್ ನ್ಯೂಸ್ ಸುದ್ದಿವಾಹಿನಿ ನಡೆಸಿದ ಸಮೀಕ್ಷಾ ವರದಿ ತಿಳಿಸಿದೆ.

ಈ ಹಿಂದಿನ ಸಮೀಕ್ಷೆಯಲ್ಲಿ ಹಿಲರಿಯವರು ಟ್ರಂಪ್‌ಗಿಂತ ಕೇವಲ ಶೇ.1ರಷ್ಟು ಮುನ್ನಡೆಯಲ್ಲಿದ್ದರು. ಇದೀಗ ಅವರ ಮುನ್ನಡೆಯಲ್ಲಿ ಶೇ.2ರಷ್ಟು ಹೆಚ್ಚಳವಾದಂತಾಗಿದೆ.

ಟಿವಿ ಚರ್ಚೆ ಕಾರ್ಯಕ್ರಮದ ಬಳಿಕ ನಿರ್ಣಾಯಕ ಸಂಖ್ಯೆಯ ಮತದಾರರನ್ನು ಹೊಂದಿರುವ ಫ್ಲೋರಿಡಾ ರಾಜ್ಯದಲ್ಲಿ ಹಿಲರಿಗೆ ಭಾರೀ ಬೆಂಬಲ ವ್ಯಕ್ತವಾಗಿರುವುದಾಗಿ ಸಮೀಕ್ಷೆ ಹೇಳಿದೆ.

 ಈ ಮಧ್ಯೆ ಇನ್ನೊಂದು ಪ್ರಮುಖ ರಾಜ್ಯವಾದ ಮಿಶಿಗನ್‌ನಲ್ಲಿ ಡೆಟ್ರಾಯಿಟ್ ನ್ಯೂಸ್-ಡಬ್ಲುಐಟಿವಿ ನಡೆಸಿದ ಸಮೀಕ್ಷೆಯು ಕೂಡಾ ಟಿವಿ ಚರ್ಚಾಗೋಷ್ಠಿಯ ಬಳಿಕ ಹಿಲರಿ ಟ್ರಂಪ್‌ಗಿಂತ ಶೇ.7 ಅಂಕಗಳ ಮುನ್ನಡೆ ಸಾಧಿಸಿದ್ದಾರೆಂದು ಹೇಳಿದೆ. ಆದರೆ ಗಣನೀಯ ಸಂಖ್ಯೆಯ ಅಮೆರಿಕನ್ ಮತದಾರರು ಇಬ್ಬರು ಅಭ್ಯರ್ಥಿಗಳ ಬಗೆಗೂ ಒಲವು ಹೊಂದಿಲ್ಲ ಹಾಗೂ ಅವರಲ್ಲಿ ಅನೇಕರು ಯಾರಿಗೆ ಮತಚಲಾಯಿ ಸಬೇಕೆಂಬ ಬಗ್ಗೆ ಇನ್ನೂ ಅನಿಶ್ಚಿತತೆಯಲ್ಲಿದ್ದಾರೆಂದು ಸಮೀಕ್ಷೆ ಹೇಳಿದೆ.

ಟ್ರಂಪ್ ಪ್ರಾಮಾಣಿಕ ಹಾಗೂ ನಂಬಿಕಸ್ಥನೆಂದು ಭಾವಿಸುವ ಮತದಾರರ ಸಂಖ್ಯೆಯು ಸೆಪ್ಟೆಂಬರ್ ತಿಂಗಳ ಮಧ್ಯದಿಂದೀಚೆಗೆ ಶೇ.8ರಷ್ಟು ಕುಸಿತವನ್ನು ಕಂಡಿದ್ದು, ಶೇ.31ಕ್ಕೆ ತಲುಪಿದೆ. ಆದರೆ ಕ್ಲಿಂಟನ್ ವಿಶ್ವಾಸರ್ಹತೆಯ ಬಗ್ಗೆ ನಂಬಿಕೆ ಹೊಂದಿರುವವರ ಸಂಖ್ಯೆಯಲ್ಲಿ ಬದಲಾವಣೆಯಾಗಿಲ್ಲ. ಎರಡು ವಾರಗಳ ಹಿಂದೆ ಶೇ.34 ಮಂದಿ ಆಕೆ ಪ್ರಾಮಾಣಿಕರು ಹಾಗೂ ವಿಶ್ವಸಾರ್ಹತೆಯುಳ್ಳವರು ಎಂದು ಹೇಳಿದ್ದರೆ, ಈಗ ಆ ಸಂಖ್ಯೆ ಶೇ.34ಕ್ಕೇರಿದೆ.

ಫಾಕ್ಸ್ ನ್ಯೂಸ್ ನಡೆಸಿದ ಸಮೀಕ್ಷೆಯಲ್ಲಿ ಅವರಲ್ಲಿ 911 ಮಂದಿ ಸಂಭಾವ್ಯ ಮತದಾರರು ಪಾಲ್ಗೊಂಡಿದ್ದರು. ಮಂಗಳವಾರದಿಂದ ಗುರುವಾರದವರೆಗೆ ಈ ಸಮೀಕ್ಷೆಯನ್ನು ನಡೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News