×
Ad

ಜೀವಾಪಾಯದಿಂದ ಸ್ವಲ್ಪದರಲ್ಲೇ ಪಾರಾದ ರಾಹುಲ್ ಗಾಂಧಿ

Update: 2016-10-01 23:38 IST

ಆಗ್ರಾ,ಅ.1: ಶನಿವಾರ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ತಲೆ ವಿದ್ಯುತ್ ವೈರವೊಂದನ್ನು ಸ್ಪರ್ಶಿಸಿದ್ದು, ಕೂದಲೆಳೆಯ ಅಂತರದಲ್ಲಿ ಜೀವಾಪಾಯದಿಂದ ಪಾರಾಗಿದ್ದಾರೆ. ಇದು ಚುನಾವಣಾ ಸನ್ನಿಯಲ್ಲಿರುವ ಉತ್ತರ ಪ್ರದೇಶದಲ್ಲಿ ಅವರು ಕೈಗೊಂಡಿರುವ ‘ಕಿಸಾನ್ ಮಹಾಯಾತ್ರಾ’ ದಲ್ಲಿ ನಡೆದಿರುವ ಎರಡನೇ ಭದ್ರತಾ ವೈಫಲ್ಯವೆಂದು ಬಣ್ಣಿಸಲಾಗಿದೆ.

 ಆದರೆ ರಾಹುಲ್ ಸ್ಪರ್ಶಕ್ಕೆ ಬಂದಿದ್ದ ವೈರ್ ಸಜೀವವಾಗಿತ್ತೇ ಎನ್ನುವುದು ಸ್ಪಷ್ಟವಾಗಿಲ್ಲ. ರಾಹುಲ್ ತಲೆ ವೈರ್‌ಗೆ ತಗುಲಿದ್ದಲ್ಲ, ಅತಿಯಾಗಿ ಬಿಸಿಯಾಗಿದ್ದ ಹೆಲೋಜಿನ್ ಬಲ್ಬ್‌ಗೆ ತಾಗಿತ್ತು. ಅದು ವಿದ್ಯುತ್ ಆಘಾತವಾಗಿರಲಿಲ್ಲ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಹೇಳಿದರು. ಸೀತಾಪುರದಲ್ಲಿ ರಾಹುಲ್ ಅವರತ್ತ ‘ಶೂ ಬಾಣ ’ಪ್ರಯೋಗವಾದ ಇತ್ತೀಚಿನ ಘಟನೆಯ ಬೆನ್ನಿಗೇ ಈ ವೈರ್ ಪ್ರಕರಣ ನಡದಿರುವುದು ಭದ್ರತಾ ಸಿಬ್ಬಂದಿಗಳನ್ನು ಆತಂಕದಲ್ಲಿ ತಳ್ಳಿದೆ,ಅಲ್ಲದೆ ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.

ಫವಡಾ ಕ್ರಾಸಿಂಗ್‌ನಲ್ಲಿ ಮಹಾರಾಜ ಅಗ್ರಸೇನನ ಪ್ರತಿಮೆಗೆ ಮಾಲಾರ್ಪಣೆ ಮಾಡಲು ರಾಹುಲ್ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಅವರು ಆಘಾತಗೊಂಡು ತಲೆಯನ್ನು ತಟಕ್ಕನೆ ಬಗ್ಗಿಸಿದ್ದು, ಎಸ್‌ಪಿಜಿ ಸಿಬ್ಬಂದಿ ವೈರ್‌ನ್ನು ಮೇಲಕ್ಕೆತ್ತಿ ಹಿಡಿದಿದ್ದು ಮತ್ತು ಪ್ರತಿಮೆಗೆ ಮಾಲಾರ್ಪಣೆ ಮಾಡುವಾಗ ಜೊತೆಯಲ್ಲಿದ್ದ ಅರ್ಚಕರೋರ್ವರಿಗೆ ಸನ್ನೆಯ ಮೂಲಕ ರಾಹುಲ್ ಅದನ್ನು ವಿವರಿಸುತ್ತಿರುವ ಚಿತ್ರಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ‘ನಿಮಗೇನೂ ಆಗಿಲ್ಲ ತಾನೇ’ ಎಂದು ಬಬ್ಬರ್ ಪ್ರಶ್ನಿಸಿದಾಗ,‘ನೀವು ನನಗೆ ವಿದ್ಯುತ್ ಸ್ಪರ್ಶ ಮಾಡಿಸಿಬಿಟ್ಟಿರಿ’ ಎಂದು ರಾಹುಲ್ ಉತ್ತರಿಸಿದರು. ಈ ಘಟನೆಯ ಬಳಿಕ ರಾಹುಲ್ ತನ್ನ ಯಾತ್ರೆಯನ್ನು ಮುಂದುವರಿಸಿದರು. ರಾಹುಲ್‌ಗೆ ತಗುಲಿತ್ತೆನ್ನಲಾದ್ ವೈರ್‌ನಿಂದ ಮಾರುಕಟ್ಟೆಯಲ್ಲಿನ ಅಂಗಡಿಗಳಿಗೆ ವಿದ್ಯುತ್ ಪೂರೈಕೆಯಾಗುತ್ತಿದೆ ಎಂದು ಸ್ಥಳೀಯರೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News