ಮಂಗಳೂರಿನಲ್ಲಿ ಗಾಂಧಿ ಜಯಂತಿ: ಕಮಿಷನರ್ ರಿಂದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ
ಮಂಗಳೂರು, ಅ.2: ಭಾರತ್ ಸೇವಾದಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಪುರಭವನದ ಬಳಿ ಗಾಂಧಿ ಪ್ರತಿಮೆಗೆ ಮಂಗಳೂರು ಪೊಲೀಸ್ ಕಮೀಷನರ್ ಚಂದ್ರಶೇಖರ ಮಾಲಾರ್ಪಣೆಗೈದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಿರಿಯರ ತ್ಯಾಗದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಶಾಂತಿ ಸೌಹಾರ್ದತೆ ಉಳಿಸುವ ಮೂಲಕ ಸ್ವಾತಂತ್ರ್ಯ ಉಳಿಸಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪ್ರಭಾರ ಜಿಲ್ಲಾಧಿಕಾರಿ ಕುಮಾರ್, ಕಸಾಪ ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಕೆಎಸ್ಸಾರ್ಟಿಸಿ ನಿರ್ದೇಶಕ ಸುಧೀರ್ ಟಿ.ಕೆ., ಸೇವಾದಳ ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ, ಕೇಂದ್ರೀಯ ಸಮಿತಿ ಸದಸ್ಯ ಅಲ್ಪೋನ್ಸೋ ಫ್ರಾಂಕೋ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಪಿ.ಮದನ ಮಾಸ್ತರ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸೇರಾಜೆ ಕೆ.ಪಿ.ಮದನ ಮಾಸ್ತರ್, ಪ್ರಸ್ತುತ ಕೇಂದ್ರ ಸರಕಾರ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡುವುದಾಗಿ ಹೇಳುತ್ತಿದೆ. ಆದರೆ ಇದು ಅವಿವೇಕತನ ಮಾತು ಎಂದು ಹೇಳಿದರು.
ಮಹಾತ್ಮ ಗಾಂಧೀಜಿ ಅವರ ಆದರ್ಶಗಳು ಇಂದಿಗೂ ಪ್ರಸ್ತುತ ಆಗಿದೆ. ಸತ್ತ ಮೇಲೂ ಅಮರವಾಗಿರುವ ಏಕೈಕ ವ್ಯಕ್ತಿ ಎಂದರೆ ಗಾಂಧೀಜಿ. ಆದ್ದರಿಂದ ಅವರ ತತ್ವಾದರ್ಶಗಳನ್ನು ಭಾರತದಿಂದ ಬೇರೆ ಮಾಡಲು ಆಗುವುದಿಲ್ಲ ಎಂದರು. ಗಾಂಧಿ ಅವರ ತತ್ವಗಳನ್ನು ಇಂದಿಗೂ ಅಳವಡಿಸಿಕೊಂಡು ಬಂದಿರುವ ನನಗೆ ಅವರ ಜಯಂತಿಯ ದಿವಸ ಸನ್ಮಾನ ಮಾಡುತ್ತಿರುವುದು ಬಹಳ ಸಂತೋಷವಾಗಿದೆ. 1942ರ ಆಗಸ್ಟ್ ಮೊದಲ ವಾರದಲ್ಲಿ ಎಂ.ಡಿ.ಅಧಿಕಾರಿ ಅವರ ನೇತೃತ್ವದಲ್ಲಿ ಇದೇ ಜಾಗ (ನಗರದ ಗಾಂಧಿ ಪಾರ್ಕ್)ದಲ್ಲಿ ಸ್ವಾತಂತ್ರ್ಯ ಚಳುವಳಿ ನಡೆಯಿತು. ಎಂ.ಡಿ.ಅಧಿಕಾರಿ ಮಾತನಾಡುತ್ತಿರುವಾಗಲೇ ಲಾಠಿ ಚಾರ್ಜ್ ನಡೆಯಿತು. ಅಧಿಕಾರಿ ಅವರ ತೊಡೆಗೆ ಗಾಯವಾಯಿತು. ಆ ಸಂದರ್ಭದಲ್ಲಿ 20 ಜನರನ್ನು ಬಂಧನ ಮಾಡಿದರು. ಕಜಂಪಾಡಿ ವಿಷ್ಣು ಭಟ್ ಮುಂಬೈಗೆ ಓಡಿ ಹೋದರು. ಪೆರ್ಲ ಗೋಪಾಲಕೃಷ್ಣ ಭಟ್‌ರ ಬಂಧನವಾಯಿತು. ನಾನು ಕನ್ಯಾ ಕುಮಾರಿಗೆ ಹೋದೆ. ಅಲ್ಲಿಂದ ನಾಗರಕೋಯಿಲ್‌ಗೆ ತೆರಳಿ ಟೆಲಿಗ್ರಾಫ್ ಶಿಕ್ಷಣ ಪಡೆದು ದಕ್ಷಿಣ ಭಾರತ ರೈಲ್ಪೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಬಳಿಕ ಮಿಲಿಟರಿ ರೈಲ್ವೆ ಭಾಗದಲ್ಲಿ ಸೇವೆ ಮಾಡಿದ್ದೇನೆ. 1946ರಲ್ಲಿ ಕೆಲಸ ಬಿಟ್ಟು ಹುಟ್ಟೂರು ಪೆರ್ಲಕ್ಕೆ ಬಂದು ದೈಹಿಕ ಶಿಕ್ಷಕನಾಗಿದ್ದೆ. ರೈತ ಹಾಗೂ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ಸಮಾಜ ಸೇವೆ ಆರಂಭಿಸಿದ್ದೇನೆ. 1952ರವರೆಗೆ ಕಾಂಗ್ರೆಸ್‌ನಲ್ಲಿದ್ದೆ. ಬಳಿಕ ಬೇರೆ ಬೇರೆ ಪಕ್ಷಕ್ಕೆ ಹೋದೆ. ನನಗೆ ಮುಂದಿನ ಜನವರಿ 2ಕ್ಕೆ 100 ವರ್ಷ ಪೂರ್ತಿಯಾಗಲಿದೆ ಎಂದು ತನ್ನ ಹಳೆಯ ದಿನಗಳ ನೆನಪನ್ನು ಮದನ ಮಾಸ್ತರ್ ಹಂಚಿಕೊಂಡರು.
ಕಾರ್ಯಕ್ರಮಕ್ಕೂ ಮುಂಚೆ ಸೇವಾದಳದ ವಿದ್ಯಾರ್ಥಿಗಳಿಂದ ನಗರದ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ನಡೆಯಿತು.