ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿ ಜಯಂತಿ ಆಚರಣೆ
ಮಂಗಳೂರು, ಅ.2: ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಗಾಂಧಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗಾಂಧೀಜಿ ತತ್ವವನ್ನು ಜನರಿಗೆ ಮುಟ್ಟಿಸುವಲ್ಲಿ ವಿಫಲರಾಗಿರುವುದರಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಹಿಂಸೆಯ ಮೂಲಕ ಬಿಜೆಪಿ ಅಧಿಕಾರಕ್ಕೇರಿತು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ಮನಪಾ ಮೇಯರ್ ಎಂ. ಹರಿನಾಥ್ ಗಾಂಧಿಯವರು ಗ್ರಾಮೀಣಾಭಿವೃದ್ಧಿಯಾಗಬೇಕು ಎಂದು ಆಶಿಸಿದವರು. ಸರಳತೆಯನ್ನು ಮೈಗೂಡಿಸಿಕೊಂಡಿದ್ದವರು ಎಂದರು. ಪ್ರಸಕ್ತ ಯೋಧರ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಕಾರ್ಗಿಲ್ ಹೋರಾಟ ದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕಾಂಗ್ರೆಸ್. ಇಂದಿರಾಗಾಂಧಿಯವರು ಪಾಕಿಸ್ತಾನದೊಂದಿಗೆ ಯುದ್ಧ ಮಾಡಿ 1 ಲಕ್ಷ ಪಾಕಿಸ್ತಾನದವರನ್ನು ಸೆರೆ ಹಿಡಿದಿದ್ದರು. ಆದರೆ ಇದನ್ನು ಇಟ್ಟುಕೊಂಡು ಕಾಂಗ್ರೆಸ್ ರಾಜಕೀಯ ಮಾಡಿಲ್ಲ ಎಂದರು.