ಹರ್ಯಾಣ: ಪುಟ್ಟಗ್ರಾಮದಲ್ಲಿ ದೊಡ್ಡ ಕ್ರಾಂತಿ
ಚಂಡೀಗಢ, ಅ.2: ಹರ್ಯಾಣದ ಈ ಪುಟ್ಟ ಗ್ರಾಮದ ಜನ ಪ್ರತಿ ದಿನದ ಮುಂಜಾನೆ ಯಾತ್ರೆಗೆ ಗುಡ್‌ಬೈ ಹೇಳಿದ್ದಾರೆ. ಪ್ರತಿದಿನ ಬೆಳಗಾದರೆ ಬಯಲಿನತ್ತ ಶೌಚಕ್ಕಾಗಿ ಸಾಲು ಸಾಲಾಗಿ ಹೋಗುತ್ತಿದ್ದ ಗ್ರಾಮಸ್ಥರು ಇದೀಗ "ಬಯಲುಶೌಚ ಮುಕ್ತ" ಗ್ರಾಮವಾಗಿ ರೂಪುಗೊಂಡಿದೆ. ಜಾಟ್ ಸಮುದಾಯದ ಪ್ರಾಬಲ್ಯದ ಗ್ರಾಮದಲ್ಲಿ ಇದ್ದ ಕೊನೆಯ ಕುಟುಂಬ ಕೂಡಾ ಸ್ವಂತ ಶೌಚಾಲಯ ಹೊಂದುವ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿದೆ.
ಇದು ಪಾಣಿಪತ್‌ನ ಜಟ್ಟಿಪುರದ ಯಶೋಗಾಥೆ. ಪೂನಮ್ ಎಂಬ ದಲಿತ ಮಹಿಳೆಯ ಪುಟ್ಟಮನೆಯೂ ಈಗ ಶೌಚಾಲಯ ಹೊಂದಿದೆ. ದೇಶಾದ್ಯಂತ ಸ್ವಚ್ಛಭಾರತ ಯೋಜನೆಯ ಎರಡನೇ ವರ್ಷಾಚರಣೆ ಸಂದರ್ಭ ಬಯಲುಶೌಚ ಮುಕ್ತ ಜಿಲ್ಲೆ ಎಂದು ಘೋಷಣೆಯಾಗಿರುವ ಹತ್ತು ಜಿಲ್ಲೆಗಳಲ್ಲಿ ಇದೂ ಒಂದು. ಈಗಾಗಲೇ 24 ಜಿಲ್ಲೆಗಳು ಈ ಹೆಗ್ಗಳಿಕೆಗೆ ಪಾತ್ರವಾಗಿವೆ.
ಗ್ರಾಮಪಂಚಾಯತ್ ಸರಪಂಚ ಇದಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ ಎಂದು ಮಹಿಳೆ ಹೇಳುವಾಗ ಮುಖದಲ್ಲಿ ಮಂದಹಾಸ ಮಿನುಗುತ್ತಿತ್ತು. 2007ರಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಇಲ್ಲಿಗೆ ಭೇಟಿ ನೀಡಿ, ಈ ಕ್ರಾಂತಿಗೆ ಮುನ್ನುಡಿ ಬರೆದಿದ್ದರು. ಅವರ ಜತೆಗಿನ ಸಂವಾದದ ವೇಳೆ ಮುಖದ ಮೇಲಿನ ಪರದೆ ತೆಗೆಯುವಂತೆ ಕೋರಿದ್ದರು. ಆದರೆ ಅದಕ್ಕೆ ಮಹಿಳೆಯರು ಸಿದ್ಧವಿರಲಿಲ್ಲ. ಬಯಲುಶೌಚಕ್ಕೆ ಹೋಗುವಾಗ ಮುಖ ಮುಚ್ಚಿಕೊಂಡಿರುತ್ತಾರೆಯೇ ಎಂದು ಅಧಿಕಾರಿ ಪ್ರಶ್ನಿಸಿದ್ದರು. ಕಾರಿನಲ್ಲಿ ಬಂದು ಜನ ಬಯಲಲ್ಲಿ ಶೌಚ ಕಾರ್ಯ ಮುಗಿಸಿ ಹೋಗುತ್ತಿದ್ದುದನ್ನೂ ಅವರು ಕಂಡಿದ್ದರು.
ಬಳಿಕ ಯುವಕರ ತಂಡ ರಚಿಸಿ, ಊರಿನಲ್ಲಿ ಮುಕ್ತ ಶೌಚದ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಆರಂಭದಲ್ಲಿ ಜನ ವಿರೋಧ ವ್ಯಕ್ತಪಡಿಸಿದರೂ, ಬಳಿಕ ತಮ್ಮ ತಪ್ಪು ತಿದ್ದಿಕೊಂಡರು. ಕೊನೆಯ ಹಂತದಲ್ಲಿ ಪಂಚಾಯ್ತಿ 64 ಶೌಚಾಲಯ ನಿರ್ಮಿಸಿಕೊಟ್ಟು, ಬಯಲು ಶೌಚಮುಕ್ತ ಗ್ರಾಮ ರೂಪಿಸಿತು.