ಕರ್ನಿರೆ- ಏಸ್ ಸಿವಿಲ್ ಸರ್ವಿಸ್ ಅಕಾಡಮಿ ಉದ್ಘಾಟನೆ

Update: 2016-10-02 08:10 GMT

ಮಂಗಳೂರು, ಅ.2: ಉನ್ನತ ನಾಗರಿಕ ಸೇವೆಗಳ ಪರೀಕ್ಷೆಗೆ ತರಬೇತಿ ನೀಡುವ ಉದ್ದೇಶವನ್ನಿಟ್ಟುಕೊಂಡು ಏಸ್ ಫೌಂಡೇಶನ್ ವತಿಯಿಂದ ಆರಂಭಿಸಲಾದ ಕರ್ನಿರೆ- ಏಸ್ ಸಿವಿಲ್ ಸರ್ವಿಸ್ ಅಕಾಡಮಿಯನ್ನು ಇಂದು ಬಲ್ಮಠದ ಮಿಷನ್ ಕಂಪೌಂಡ್‌ನ ವಿಶ್ವಾಸ್ ರಾಯಲ್ ಅಪಾರ್ಟ್‌ಮೆಂಟ್ ಸನಿಹದಲ್ಲಿರುವ ಕೆಎಸಿಎಸ್‌ಎ ಕ್ಯಾಂಪಸ್‌ನಲ್ಲಿ ಚೆನ್ನೈ ಎಕೆ ಐಎಎಸ್ ಅಕಾಡಮಿ ಸ್ಥಾಪಕಾಧ್ಯಕ್ಷ ಮೌಲಾನ ಶಂಸುದ್ಧೀನ್ ಖಾಸಿಮಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉನ್ನತ ನಾಗರಿಕ ಸೇವೆಯಾದ ಐಎಎಸ್, ಐಪಿಎಸ್‌ನಲ್ಲಿ ತೇರ್ಗಡೆಯಾಗಲು ಶ್ರಮ, ಸಹನೆ ಅಗತ್ಯ. ಸಮುದಾಯದ ಯುವಜನರಿಗೆ ಪದವಿಯಾದ ತಕ್ಷಣ ಹಣ ಮಾಡಬೇಕೆಂಬ ಆಸೆಯಿರುತ್ತದೆ. ಆದರೆ ಐಎಎಸ್, ಐಪಿಎಸ್ ತೇರ್ಗಡೆಯಾಗಲು ಸಹನೆಯಿರಬೇಕು. ಅದೇ ರೀತಿಯಲ್ಲಿ ಸಂಸ್ಥೆ ಕೂಡ ತಕ್ಷಣ ಫಲಿತಾಂಶವನ್ನು ನಿರೀಕ್ಷಿಸದೆ ತರಬೇತಿಯನ್ನು ನೀಡಬೇಕು ಎಂದು ಹೇಳಿದರು.

ರಾಜಕಾರಣದಲ್ಲಿ ಸೀಮಿತ ಅವಧಿಯಲ್ಲಿ ಅಧಿಕಾರ ಪಡೆಯಬಹುದು. ಆದರೆ ಅಧಿಕಾರಿಯಾಗಿದ್ದರೆ ದೀರ್ಘಾವಧಿ ಅಧಿಕಾರ ನಡೆಸಬಹುದು. ಈ ಹಿನ್ನೆಲೆಯಲ್ಲಿ ಸಮುದಾಯದ ಯುವಕರು ಅಧಿಕಾರಿಗಳಾಗುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಐಜಿಪಿ ಯು.ನಿಸಾರ್ ಅಹ್ಮದ್, ಸರಕಾರಿ ಕೆಲಸಕ್ಕೆ ಸೇರುವ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಮುಸ್ಲಿಂ ಸಮುದಾಯದ ಯುವಕರು ಸರಕಾರಿ ಸೇವೆಯಲ್ಲಿ ಕೆಲಸ ಮಾಡಲು ಹಿಂಜರಿಯುತ್ತಾರೆ. ಯುವಕರು ಸರಕಾರಿ ಸೇವೆಯಲ್ಲಿ ಕೆಲಸ ಮಾಡುವ ಬಗ್ಗೆ ಜಾಗೃತಿಯನ್ನು ಯುವಕರಲ್ಲಿ ಮತ್ತು ಪೋಷಕರಲ್ಲಿ ಮೂಡಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಕರ್ನಾಟಕ ಗೃಹ ಮಂಡಳಿ ಆಯುಕ್ತ ಎ.ಬಿ.ಇಬ್ರಾಹೀಂ ಮಾತನಾಡಿ, ಮುಸ್ಲಿಂ ಸಮುದಾಯದ ಯುವಕರು ಕೇವಲ ಐಎಎಸ್, ಐಪಿಎಸ್ ಗುರಿಯನ್ನಿಡುವುದರ ಜೊತೆಗೆ ದೇಶದಲ್ಲಿರುವ ಎಲ್ಲಾ ನಾಗರಿಕ ಸೇವೆಯಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ಚಿಂತನೆ ಹೊಂದಿರಬೇಕು ಎಂದರು.

ದಕ್ಷಿಣ ಕನ್ನಡ ಜಿಲ್ಲಾ ವಕ್ಪ್ ಸಲಹಾ ಮಂಡಳಿ ಅಧ್ಯಕ್ಷ ಎಸ್ .ಎಂ.ರಶೀದ್ ಹಾಜಿ, ಏಸ್ ಫೌಂಡೇಶನ್ ಅಧ್ಯಕ್ಷ ಹಾಜಿ ಕರ್ನಿರೆ ಸೈಯದ್ , ಮನ್ಸೂರ್ ಆಝಾದ್, ಅಬ್ದುರ್ರವೂಫ್ ಪುತ್ತಿಗೆ, ಸಿರಾಜ್ ಅಹ್ಮದ್ ಉಪಸ್ಥಿತರಿದ್ದರು.

ಏಸ್ ಫೌಂಡೇಶನ್ ಅಧ್ಯಕ್ಷ ಸಾದುದ್ದೀನ್ ಸಾಲಿಹ್ ಸ್ವಾಗತಿಸಿದರು. ನಿರ್ದೇಶಕ ನಝೀರ್ ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News