ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರಿ
ಶ್ರೀನಗರ, ಅ.2: ಪಾಕಿಸ್ತಾನ ಜೊತೆಗಿನ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಯಾವುದೇ ಸಂಭವನೀಯ ಪರಿಸ್ಥಿತಿಗೆ ಸಜ್ಜಾಗಿರುವಂತೆ ಭೂಸೇನೆ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸೇನೆಗೆ ಕರೆ ನೀಡಿದ್ದಾರೆ. ಭಾರತೀಯ ಸೇನೆಯ ಸನ್ನದ್ಧತೆ ವೀಕ್ಷಿಸಲು ಜಮ್ಮು ಮತ್ತು ಕಾಶ್ಮೀರಕ್ಕೆ ಆಗಮಿಸಿದ್ದ ಅವರು, "ಕಟ್ಟೆಚ್ಚರ" ವಹಿಸುವಂತೆಯೂ ಸಹೋದ್ಯೋಗಿಗಳಿಗೆ ಸೂಚನೆ ನೀಡಿದ್ದಾರೆ.
ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಡಿ.ಎಸ್.ಹೂಡಾ ಹಾಗೂ ಶ್ರೀನಗರ ಮೂಲದ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ, ರಾಜ್ಯ ಮುಖ್ಯ ಕಾರ್ಯದರ್ಶಿ ಬಿ.ಎಸ್.ಶರ್ಮಾ ಹಾಗೂ ಡಿಜಿಪಿ ಕೆ.ರಾಜೇಂದ್ರ ಕುಮಾರ್ ಸಭೆಯಲ್ಲಿ ಭಾಗವಹಿಸಿದ್ದರು. ಗಡಿ ನಿಯಂತ್ರಣ ರೇಖೆ ಮತ್ತು ಒಳನಾಡಿನ ಪರಿಸ್ಥಿತಿ ಬಗ್ಗೆ ಸಭೆಯಲ್ಲಿ ಅವಲೋಕಿಸಲಾಯಿತು.
"ಸಭೆಯಲ್ಲಿ ಲೆಫ್ಟಿನೆಂಟ್ ಜನರಲ್ ಹೂಡಾ ಅವರು, ಸೇನೆ ಅತ್ಯಂತ ಜಾಗರೂಕ ಮತ್ತು ಯಾವುದೇ ಸಂಭವನೀಯ ಸ್ಥಿತಿ ಎದುರಿಸಲು ಸನ್ನದ್ಧರಾಗಿರುವಂತೆ ಆದೇಶ ನೀಡಿದರು" ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ಸರ್ಜಿಕಲ್ ದಾಳಿ ಹಿನ್ನೆಲೆಯಲ್ಲಿ ದೇಶದ ಗಡಿಭಾಗದ ಭದ್ರತಾ ಸನ್ನದ್ಧತೆ ಬಗ್ಗೆ ಪರಿಶೀಲನೆ ನಡೆಸಲಾಯಿತು.
ಇಂಥ ಸೂಕ್ಷ್ಮ ಸಂದರ್ಭದಲ್ಲಿ ಕಾಶ್ಮೀರ ಜನತೆ ಶಾಂತಿ ಹಾಗೂ ತಾಳ್ಮೆಯಿಂದ ಇದ್ದು, ಈ ಸವಾಲನ್ನು ಎದುರಿಸಲು ಸೇನೆ ಹಾಗೂ ಸರಕಾರದ ಜತೆ ಕೈಜೋಡಿಸಬೇಕು ಎಂದು ಸೇನೆ ಮನವಿ ಮಾಡಿದೆ.