ಕಾಟಾಚಾರಕ್ಕೆ ಗಾಂಧೀ ಜಯಂತಿ ಆಚರಣೆ ದುರಂತ: ಶಾಸಕಿ ಶಕುಂತಳಾ ಶೆಟ್ಟಿ
ಪುತ್ತೂರು, ಅ.2: ಗಾಂಧೀ ತತ್ವಗಳಲ್ಲಿ ಎಲ್ಲವನ್ನೂ ರೂಡಿಸಿಕೊಳ್ಳುವುದು ಕಷ್ಟದ ಕೆಲಸವಾಗಿದೆ. ಆದರೆ ಕೆಲವನ್ನಾದರೂ ರೂಢಿಗತಗೊಳಿಸುವ ಪ್ರಯತ್ನ ನಡೆಯದಿರುವುದು ಹಾಗೂ ಕಾಟಾಚಾರಕ್ಕಾಗಿ ಗಾಂಧಿ ಜಯಂತಿಯನ್ನು ವರ್ಷಕ್ಕೊಮ್ಮೆ ಆಚರಣೆ ಮಾಡುವುದು ದುರಂತ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ರವಿವಾರ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಪುರಭವನದಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜನ್ಮದಿನಾಚರಣೆ ‘ಜಾಗತಿಕ ಅಹಿಂತಾ ದಿನಾಚರಣೆ-2016’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಿನ ರಾಜಕೀಯ ಮತ್ತು ಸಾರ್ವಜನಿಕ ಬದುಕು ಗಾಂಧೀ ಚಿಂತನೆಗೆ ತದ್ವಿರುದ್ಧವಾಗಿದೆ. ಖಾಕಿ, ಖಾದಿ ಮತ್ತು ಕಾವಿ ಜನರ ನಂಬಿಕೆಯನ್ನು ಕಳೆದುಕೊಂಡಿದೆ. ಗಾಂಧೀಜಿ ಮತ್ತು ಶಾಸ್ತ್ರಿಗಳಂತಹ ವ್ಯಕ್ತಿಗಳ ತ್ಯಾಗ ನಮ್ಮನ್ನು ಎತ್ತರದ ಮಟ್ಟಕ್ಕೆ ಬೆಳೆಸಿದ್ದು, ಇದೀಗ ಗಾಂಧೀಜಿ ಚಿಂತನೆಗೆ ಅವಮಾನ ಮಾಡುವ ಕೆಲಸಗಳು ನಡೆಯುತ್ತಿದೆ ಎಂದರು.
ಪುತ್ತೂರಿನ ನೂತನ ಬಸ್ಸು ನಿಲ್ದಾಣಕ್ಕೆ ಮಹಾತ್ಮ ಗಾಂಧೀ ಹೆಸರನ್ನು ನಾಮಕರಣಗೊಳಿಸುವಂತೆ ತಾನು ಹಾಗೂ ಉಪವಿಭಾಗಾಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದು, ಈ ಬಸ್ಸು ನಿಲ್ದಾಣ ಖಾಸಗಿಯಾಗಿ ನಿರ್ಮಾಣಗೊಂಡಿರುವ ಕಾರಣ ಮಾಲಕರ ಒಪ್ಪಿಗೆಯ ಅಗತ್ಯವಿದೆ. ಗಾಂಧೀ ಕಟ್ಟೆಗೆ ಮತ್ತು ಇಲ್ಲಿರುವ ಗಾಂಧೀಜಿ ಪ್ರತಿಮೆಗೆ ಯಾವುದೇ ಅವಮಾನವಾಗದಂತೆ ಕಾಳಜಿ ವಹಿಸಲಾಗುವುದು ಎಂದರು.
ಗಾಂಧೀ ಭಜನೆಯನ್ನು ಎಲ್ಲಾ ವಿದ್ಯಾರ್ಥಿಗಳು ರೂಢಿಗತಗೊಳಿಸಬೇಕು ಎಂದ ಶಾಸಕಿ ಅವರು ಈ ಭಜನೆಯು ವಿಭಜನೆಯನ್ನು ತಪ್ಪಿಸುತ್ತದೆ. ಜಾತ್ಯಾತೀತ ಪ್ರೇರಣೆಯೊಂದಿಗೆ ರಾಷ್ಟ್ರಪ್ರೇಮವನ್ನು ಬೆಳೆಸುತ್ತದೆ ಎಂದರು.
ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯ ಪ್ರಸನ್ನ ಕುಮಾರ್ ರೈ ಸಂಸ್ಮರಣಾ ಭಾಷಣ ಮಾಡುತ್ತಾ ತನ್ನ ತಂದೆಯಾದ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ಜತ್ತಪ್ಪ ರೈ ಮತ್ತು ಗಾಂಧೀಜಿ ನಡುವಿನ ಒಡನಾಟದ ಬಗ್ಗೆ ತಿಳಿಸಿದರು. ಗಾಂಧೀಜಿ ಅವರು ತನ್ನ ಹೋರಾಟವು ಕೇವಲ ದೇಶದ ರಾಜಕೀಯ ಸ್ವಾತಂತ್ಯಕ್ಕಾಗಿ ನಡೆಸಿಲ್ಲ ಬದಲು ಇಲ್ಲಿನ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸ್ವಾತಂತ್ರಕ್ಕಾಗಿ ಅವರು ಹೋರಾಟ ನಡೆಸಿದ್ದರು ಎಂದರು.
ಗಾಂಧಿಕಟ್ಟೆ ಸಮಿತಿ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಗಾಂಧೀಜಿ ವಿಶ್ರಾಂತಿ ಪಡೆದ ಗಾಂಧಿಕಟ್ಟೆಯನ್ನು ಸ್ಮಾರಕವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಾಶ್ವತ ಕ್ರಮವನ್ನು ಕೈಗೊಳ್ಳಬೇಕು. ಹಾಗಾದಲ್ಲಿ ಗಾಂಧೀ ಜಯಂತಿಗೆ ನೈಜ ಅರ್ಥ ಬರುತ್ತದೆ. ಪುತ್ತೂರಿನ ಬಸ್ ನಿಲ್ದಾಣಕ್ಕೆ ಮಹಾತ್ಮ ಗಾಂಧಿ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ ಎಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.
ಪುತ್ತೂರು ಉಪವಿಭಾಗಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಶೀಲ್ದಾರ್ ಅನಂತ ಶಂಕರ್ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್ ವಂದಿಸಿದರು. ಪ್ರೊ. ಬಿ.ಜೆ.ಸುವರ್ಣ ಕಾರ್ಯಕ್ರಮ ನಿರೂಪಿಸಿದರು.