×
Ad

ಮೂಡುಬಿದಿರೆ: ಗಾಂಧಿ ಪಾರ್ಕಿನಲ್ಲಿ ಗಾಂಧಿ ಪ್ರತಿಮೆ ಅನಾವರಣ

Update: 2016-10-02 15:28 IST

ಮೂಡುಬಿದಿರೆ, ಅ.2: ಜ್ಯೋತಿನಗರದಲ್ಲಿರುವ ಗಾಂಧಿ ಪಾರ್ಕಿನಲ್ಲಿ ಮುಂದಿನ ಆರು ತಿಂಗಳೊಳಗೆ ಸ್ಕೇಟಿಂಗ್ ಗ್ರೌಂಡನ್ನು ನಿರ್ಮಿಸಲಾಗುವುದು. ಇದರಿಂದಾಗಿ ಇಲ್ಲಿನ ಆಸಕ್ತರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ತರಬೇತಿ ಪಡೆಯಲು ಸಹಕಾರಿಯಾಗುತ್ತದೆ. ಪಾರ್ಕನ್ನು ಮತ್ತಷ್ಟು ಜನಾಕರ್ಷಣೆಯಾಗಿಸುವ ನಿಟ್ಟಿನಲ್ಲಿ ಮೀನುಗಾರಿಕಾ ಇಲಾಖೆಯಿಂದ 25ಲಕ್ಷ ರೂ. ವೆಚ್ಚದಲ್ಲಿ ಮೀನು ಅಕ್ವೇರಿಯಂ ಒದಗಿಸಲಾಗುವುದು ಕ್ಷೇತ್ರದ ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.

ಅವರು ರವಿವಾರ ಇಲ್ಲಿನ ಜ್ಯೋತಿ ನಗರದಲ್ಲಿರುವ ಪುರಸಭೆಯ ನವೀಕೃತ ಮಹಾತ್ಮಗಾಂಧಿ ಪಾರ್ಕಿನಲ್ಲಿ ಮಹಾತ್ಮ ಗಾಂಧಿಯ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದರು.

ಪುರಸಭೆಯು ರೋಟರಿ ಪಾರ್ಕಿಗೆಂದು ಮೀಸಲಿರಿಸಿರುವ 5ಲಕ್ಷ ಮೊತ್ತವನ್ನು ಇದೇ ಪಾರ್ಕಿಗೆ ಬಳಸುವಂತೆ ಸೂಚಿಸಿದರು. ಇದೇ ಸಂದರ್ಭದಲ್ಲಿ 25ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸ್ಕೇಟಿಂಗ್ ಗ್ರೌಂಡ್‌ಗೆ ಶಂಕು ಸ್ಥಾಪನೆ, ಪಾರ್ಕಿನಲ್ಲಿರುವ ನೌಕರರ ವಸತಿಗೃಹ, ಶೌಚಾಲಯವನ್ನೂ ಉದ್ಘಾಟಿಸಿದರು. ಹಾಗೂ ಪುರಸಭೆಯ ಸ್ವಚ್ಛತಾ ಸಿಬ್ಬಂದಿಯನ್ನು ಗೌರವಿಸಿದರು.

ಪುರಸಭಾಧ್ಯಕ್ಷೆ ರೂಪಾ ಎಸ್.ಶೆಟ್ಟಿ, ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ, ಹಿರಿಯ ಕೃಷಿ ತಜ್ಞ ಡಾ.ಎಲ್.ಸಿ ಸೋನ್ಸ್, ಲಯನ್ಸ್ ಕ್ಲಬ್ ಅಧ್ಯಕ್ಷ ರುಕ್ಕಯ ಪೂಜಾರಿ, ಪ್ರೆಸ್‌ಕ್ಲಬ್ ಅಧ್ಯಕ್ಷ ಧನಂಜಯ ಮೂಡುಬಿದಿರೆ, ಟೆಂಪೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಕೊರಗಪ್ಪ, ಪುರಸಭಾ ಮುಖ್ಯಾಧಿಕಾರಿ ಶೀನ ನಾಯ್ಕ, ರೋಟರಿ ಕ್ಲಬ್ ಅಧ್ಯಕ್ಷ ಮುಹಮ್ಮದ್ ಶರೀಫ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮತ್ತಿತರರು ಉಪಸ್ಥಿತರಿದ್ದರು.

ಪುರಸಭಾ ವಾರ್ಡ್ ಸದಸ್ಯ ಸುರೇಶ್ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ ಪಾರ್ಕ್‌ನ ಅಭಿವೃದ್ಧಿ ಕಾಮಗಾರಿಗಳ ವಿವರ ನೀಡಿದರು. ಇದೇ ಸಂದರ್ಭದಲ್ಲಿ ಪುರಸಭಾ ಕಂದಾಯ ಅಧಿಕಾರಿ ಧನಂಜಯ ಸ್ವಾಗತಿಸಿದರು. ನಿತೇಶ್ ಕುಮಾರ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು. ಪುರಸಭಾ ಸದಸ್ಯ ಪಿ.ಕೆ.ಥೋಮಸ್ ವಂದಿಸಿದರು.

ಇದಕ್ಕೂ ಮೊದಲು ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಮೂಡುಬಿದಿರೆ ಸ್ವರಾಜ್ಯ ಮೈದಾನದಿಂದ ಜ್ಯೋತಿನಗರದ ವರೆಗೆ ಸ್ವಚ್ಛತಾ ರ್ಯಾಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News